×
Ad

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ‘ನರೇಗ ಬಜಾವ್ ಸಂಗ್ರಾಮ್’ ಆಂದೋಲನ

Update: 2026-01-15 20:32 IST

ಮಂಗಳೂರು, ಜ.15: ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಚಾವ್ ಸಂಗ್ರಾಮ್ ಪೂರ್ವಭಾವಿ ಸಭೆ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಕಾರ್ಮಿಕರು ಹಾಗೂ ಪಂಚಾಯತ್‌ಗಳ ಅಭಿವೃದ್ಧಿಗೆ ಪೂರಕವಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ಮತ್ತು ಕಾಯ್ದೆ ಮರುಜಾರಿಗೆ ಆಗ್ರಹಿಸಿ ಎಐಸಿಸಿ ಯ ಸೂಚನೆ ಮೇರೆಗೆ ಹಾಗೂ ಕೆಪಿಸಿಸಿಯ ನಿರ್ದೇಶನದ ಮೇರೆಗೆ ‘ನರೇಗ ಬಜಾವ್ ಸಂಗ್ರಾಮ್’ ಆಂದೋಲನವನ್ನು ದ.ಕ. ಜಿಲ್ಲೆಯಾದ್ಯಂತ ನಡೆಸಲಾಗುವುದು ಎಂದು ತಿಳಿಸಿದರು.

ವಿ.ಬಿ.ಜಿ.ರಾಮ್ ಜಿ ಯೋಜನೆಯ ಹೆಸರು ಬದಲಿಸುವುದು ಮಾತ್ರವಲ್ಲ ಜನರ ಜೀವನೋಪಾಯ ಹಾಗೂ ಪಂಚಾಯತ್‌ಗಳ ಅಧಿಕಾರವನ್ನು ಕೇಂದ್ರ ಸರಕಾರ ಕಸಿದುಕೊಂಡಿದೆ. ಇದು ದೇಶದ ಗ್ರಾಮೀಣ ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ ಎಂದು ಹೇಳಿದರು.

*ಸುಳ್ಯದಿಂದ ಮೂಲ್ಕಿ ತನಕ ಪಾದಯಾತ್ರೆ: ಜ.31ರ ಒಳಗಾಗಿ ಪ್ರತಿ ವಿಧಾನಸಭಾ ವ್ಯಾಪ್ತಿಗಳಲ್ಲಿ ‘ಮನರೇಗಾ ಬಜಾವ್ ಸಂಗ್ರಾಮ್’ ಪಾದಯಾತ್ರೆ ಆಯೋಜಿಸುವುದು, ಜ.21ರಂದು ಕುದ್ಮುಲ್ ರಂಗರಾವ್ ಪುರಭವನದ ಬಳಿ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ, ಫೆ.9, 10 ಮತ್ತು 11ರಂದು ಸುಳ್ಯದಿಂದ ಮುಲ್ಕಿವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸುವುದು, ಇತ್ತೀಚಿಗೆ ಕೆಪಿಸಿಸಿ ಸಭೆಯಲ್ಲಿ ನಡೆದ ಎಲ್ಲ ಕಾರ್ಯಕ್ರಮ ಮತ್ತು ಸೂಚನೆಗಳನ್ನು ಸುಸೂತ್ರವಾಗಿ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಸುಳ್ಯ ವಿಧಾನಸಭಾ ಅಭ್ಯರ್ಥಿ ಜಿ.ಕೃಷ್ಣಪ್ಪ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರು, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಬ್ಲಾಕ್ ಉಸ್ತುವಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News