×
Ad

ಬಿಜೆಪಿ, ಸಂಘಪರಿವಾರದ ದ್ವೇಷ ಭಾಷಣ, ಸರಕಾರದ ಬೇಜವಾಬ್ದಾರಿ ನಡೆ ಕರಾವಳಿ ಜಿಲ್ಲೆಯ ಇಂದಿನ ಸ್ಥಿತಿಗೆ ಕಾರಣ: ಸಿಪಿಐಎಂ ಆರೋಪ

Update: 2025-05-27 20:29 IST

ಮಂಗಳೂರು: ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ನಡೆದಿರುವ ಯುವಕನ ಹತ್ಯೆಯನ್ನು ಸಿಪಿಐಎಂ ಬಲವಾಗಿ ಖಂಡಿಸಿದ್ದು, ಜನತೆ ಪ್ರಚೋದನೆಗೆ ಬಲಿಯಾಗದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

ಚಾಲಕ ವೃತ್ತಿಯ ಅಮಾಯಕ ಮುಸ್ಲಿಂ ಯುವಕನನ್ನು ಮತೀಯ ದ್ವೇಷ, ಪ್ರತೀಕಾರದ ನೆಪದಲ್ಲಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕೊಲೆ ಹಾಗು ಕರಾವಳಿ ಜಿಲ್ಲೆಯ ಇಂದಿನ ಈ ಸ್ಥಿತಿಗೆ ಬಿಜೆಪಿ ಶಾಸಕರುಗಳು ಹಾಗೂ ಸಂಘಪರಿವಾರದ ದ್ವೇಷ ಭಾಷಣ, ಪ್ರಚೋದನೆಯ ರಾಜಕಾರಣ ಹಾಗೂ ಪರಿಸ್ಥಿತಿಯ ಗಂಭೀರತೆಯ ಅರಿವಿದ್ದೂ ಬೇಜವಾಬ್ದಾರಿ ನಡೆ ಪ್ರದರ್ಶಿಸಿದ ರಾಜ್ಯ ಸರಕಾರ ನೇರ ಹೊಣೆ ಎಂದು ಸಿಪಿಐಎಂ ಆರೋಪಿಸಿದೆ.

ಕಳೆದ ಮೂರು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರುಗಳು ಹಾಗು ಸಂಘಪರಿವಾರ ಸತತವಾಗಿ ದ್ವೇಷಭಾಷಣದಲ್ಲಿ ತೊಡಗಿದೆ. ಕುಡುಪು ಮಾಬ್ ಲಿಂಚಿಂಗ್ ಹಾಗೂ ಸುಹಾಸ್ ಕೊಲೆಯ ತರುವಾಯ ಪ್ರತೀಕಾರ ಹಾಗೂ ಜನಾಂಗ ದ್ವೇಷದ ಮಾತುಗಳನ್ನು ಯಾವ ಅಳುಕೂ ಇಲ್ಲದೆ ಆಡಲಾಗುತ್ತಿದೆ. ಬಿಜೆಪಿ ಶಾಸಕರುಗಳೆ ಇಂತಹ ಮಾತುಗಳಿಗೆ ಬಹಿರಂಗ ಬೆಂಬಲವಾಗಿ ನಿಂತದ್ದನ್ನು ನಾಡಿನ ಜನತೆ ಪ್ರತ್ಯಕ್ಷ ಕಂಡಿದ್ದಾರೆ. ಇಂತಹ ಪ್ರತೀಕಾರ, ದ್ವೇಷದ ಮಾತುಗಳೆ ಇಂದು ಮುಸ್ಲಿಂ ಯುವಕನ ಕೊಲೆಗೆ ಪ್ರಚೋದನೆ ಒದಗಿಸಿದೆ. ಜಿಲ್ಲೆಯನ್ನು ತೀರಾ ಅಪಾಯಕಾರಿ ಸ್ಥಿತಿಗೆ ತಂದು ನಿಲ್ಲಿಸಿದೆ. ದುಡಿದು ಬದುಕು ಕಟ್ಟುವ ಜನ ಸಾಮಾನ್ಯರು ಮನೆಯಿಂದ ಹೊರ ಬರಲು ಅಂಜುವ, ಭೀತಿಯಿಂದ ತತ್ತರಿಸುವ ಸ್ಥಿತಿಗೆ ತಲುಪಿಸಿದೆ‌ ಎಂದು ಸಿಪಿಐಎಂ ಆರೋಪಿಸಿದೆ. ಪೊಲೀಸ್ ಇಲಾಖೆ ಮುಸ್ಲಿಂ ಯುವಕನ ಕೊಲೆಯ ಹಿಂದಿನ ಎಲ್ಲಾ ಪಿತೂರಿದಾರನ್ನು, ಭಾಷಣಗಳ ಮೂಲಕ ಪ್ರಚೋದಿಸಿದವನರನ್ನು ಬಯಲಿಗೆ ಎಳೆಯಬೇಕು, ಬಿಗು ಬಂದೋಬಸ್ತ್ ಮೂಲಕ ಪರಿಸ್ಥಿತಿ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಸಿಪಿಎಂ ದ‌.ಕ. ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News