ಕುಡುಪು ಗುಂಪು ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು: ವಿಶೇಷ ತನಿಖಾ ತಂಡ ರಚಿಸಲು ಸಿಪಿಎಂ ಒತ್ತಾಯ
ಮಂಗಳೂರು: ಕುಡುಪು ಗುಂಪು ಹತ್ಯೆಯ ಗಂಭೀರ ಪ್ರಕರಣದ ಇಬ್ಬರು ಆರೋಪಿಗಳಿಗೆ 35 ದಿನಗಳ ಕಡಿಮೆ ಅವಧಿಯಲ್ಲಿ ಜಾಮೀನು ದೊರಕಿರುವುದು ವಿಷಾದಕರ ಬೆಳವಣಿಗೆಯಾಗಿದೆ. ಜಾಮೀನು ಮಂಜೂರಾತಿಗೆ ನ್ಯಾಯಾಲಯ ಪರಿಗಣಿಸಿರುವ ಅಂಶಗಳು ಸಿಪಿಎಂ ಹಾಗು ನಾಗರಿಕ ಸಂಘಟನೆಗಳು ಘಟನೆಯ ಸಂದರ್ಭ ಪೊಲೀಸ್ ಇಲಾಖೆಯ ಮೇಲೆ ಮಾಡಿರುವ ಆರೋಪಗಳನ್ನು ಪುಷ್ಟೀಕರಿಸಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ.
ಕುಡುಪು ಗುಂಪು ಹತ್ಯೆ ನಡೆದು ಗಂಟೆಗಳ ಒಳಗಡೆ ವಿಷಯ ಪೊಲೀಸ್ ಕಮಿಷನರ್ ಕಚೇರಿ ತಲುಪಿತ್ತು. ಈ ಕುರಿತು ಸಿಪಿಎಂ ಸಹಿತ ಹಲವು ಸಾಮಾಜಿಕ ಸಂಘಟನೆಗಳು, ಮಾಧ್ಯಮ ಪ್ರತಿನಿಧಿಗಳು ಆಗಿನ ಪೊಲೀಸ್ ಕಮಿಷನರ್ ಬಳಿ ಮಾಹಿತಿ ಕೇಳಿದ್ದರೂ ಅವರು 36 ತಾಸು ಮೌನ ಪಾಲಿಸಿದ್ದರು. ಘಟನೆಯ ವಿವರ ತಿಳಿದೂ ಗುಂಪು ಹತ್ಯೆಯ ಭಾಗಿದಾರನಿಂದಲೆ ದೂರು ಬರೆಸಿ ಅಸಹಜ ಸಾವು ಎಂದು ಎಫ್‌ಐಆರ್ ಬದಲಿಗೆ ಯುಡಿಆರ್ ದಾಖಲಿಸಿದ್ದರು. ಆಳವಾದ ಗಾಯಗಳಿದ್ದರೂ, ತರಚು ಗಾಯಗಳು ಎಂದು ನಾಗರಿಕ ಸಂಘಟನೆಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಸತತ ಸಾರ್ವಜನಿಕ ಒತ್ತಡದಿಂದಾಗಿ ಅನಿವಾರ್ಯವಾಗಿ 36 ತಾಸುಗಳ ಬಳಿಕ ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಅದರ ಆಧಾರದಲ್ಲಿ ಕೊಲೆ ಪ್ರಕರಣ ಎಂದು ಎಫ್‌ಐಆರ್ ದಾಖಲಿಸಲು ಮುಂದಾದರು. ಆ ಸಂದರ್ಭದಲ್ಲೂ ಸುಮಟೊ ಎಫ್‌ಐಆರ್ ದಾಖಲಿಸುವ ಬದಲಿಗೆ ಗುಂಪು ಹತ್ಯೆ ನಡೆಸಿದ ದುಷ್ಕರ್ಮಿಗಳ ಒಡನಾಟದ ವ್ಯಕ್ತಿಯನ್ನೆ ಆಯ್ಕೆ ಮಾಡಿ ದೂರು ಬರೆಸಿಕೊಂಡು ಎಫ್‌ಐಆರ್ ದಾಖಲಿಸಿದ್ದರು. ಕಮೀಷನರ್ ಸಹಿತ ಹಿರಿಯ ಅಧಿಕಾರಿಗಳ ಗಮನದಲ್ಲಿದ್ದೇ ನಡೆದ ಈ ಎಲ್ಲಾ ಪಿತೂರಿ, ಪ್ರಹಸನಕ್ಕೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹೊಣೆಯಾಗಿಸಿ ಅಮಾನತುಗೊಳಿಸಿದ್ದರು.
ಸಿಪಿಎಂ ಈ ಕುರಿತು ಆ ಸಂದರ್ಭದಲ್ಲೆ ಸರಕಾರದ ಗಮನ ಸೆಳೆದಿತ್ತು. ಪ್ರಕರಣ ಮುಚ್ಚಿ ಹಾಕುವ, ದುರ್ಬಲಗೊಳಿಸುವ ಯತ್ನಕ್ಕೆ ಪೊಲೀಸ್ ಕಮೀಷನರ್ ಹಾಗು ಹಿರಿಯ ಅಧಿಕಾರಿಗಳನ್ನು ಹೊಣೆ ಆಗಿಸುವಂತೆ, ಪ್ರಕರಣದ ತನಿಖೆಗೆ ನುರಿತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸುವಂತೆ ಆಗ್ರಹಿಸಿತ್ತು. ಆದರೆ ಸರಕಾರ ನಿರ್ಲಕ್ಷಿಸಿದ ಪರಿಣಾಮ ತಿಂಗಳ ಒಳಗಡೆ ಗುಂಪು ಹತ್ಯೆಯ ಆರೋಪಿಗಳಿಗೆ ಜಾಮೀನು ದೊರಕತೊಡಗಿದೆ. ಜಾಮೀನು ಮಂಜೂರಾತಿ ಆದೇಶಕ್ಕೆ ಅಸಹಜ ಸಾವು ಎಂದು ಯುಡಿಆರ್ ಮಾಡಿರುವುದು, ಒಂದು ದಿನ ತಡವಾಗಿ ಎಫ್‌ಐಆರ್ ದಾಖಲಿಸಿರುವುದು, ದೂರುದಾರ ಘಟನೆಯ ಪ್ರತ್ಯಕ್ಷದರ್ಶಿ ಆಗಿದ್ದರೂ ಒಂದು ದಿನ ತಡವಾಗಿ ದೂರು ನೀಡಿರುವುದು, ದೂರಿನ ಸಾರಾಂಶ ಕೊಲೆಯ ಬದಲಿಗೆ ನರಹತ್ಯೆಯ ಸೆಕ್ಷನ್‌ಗಳಿಗೆ ಹತ್ತಿರವಾಗಿದೆ ಎಂಬ ಅಂಶಗಳು ಜಾಮೀನು ನೀಡಲು ಪ್ರಮುಖ ಕಾರಣಗಳಾಗಿ ನ್ಯಾಯಾಲಯ ಪರಿಗಣಿಸಿದೆ. ಇದು ಈ ಪ್ರಕರಣದಲ್ಲಿ ಕಮಿಷನರ್ ಸಹಿತ ಹಿರಿಯ ಅಧಿಕಾರಿಗಳ ಶಾಮೀಲಾತಿ, ತನಿಖೆಗೆ ವಿಶೇಷ ತನಿಖಾ ತಂಡದ ರಚನೆಗೆ ನಮ್ಮ ಆಗ್ರಹಗಳನ್ನು ಸಮರ್ಥಿಸುತ್ತದೆ. ಸರಕಾರ ಈಗಲಾದರು ಕುಡುಪು ಗುಂಪು ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಬೇಕು,ಆಗಿನ ಕಮಿಷನರ್ ಸಹಿತ ಹಿರಿಯ ಅಧಿಕಾರಿಗಳ ಶಾಮೀಲಾತಿಯ ಆರೋಪದ ಕುರಿತು ತನಿಖೆ ನಡೆಸಬೇಕು ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.