ರಬ್ಬರ್‌ಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವರಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ
ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ರಬ್ಬರ್ ಬೆಳೆಯನ್ನು ಕೃಷಿ ಬೆಳೆಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಮತ್ತು ಅದಕ್ಕೆ ಬೆಂಬಲ ಬೆಲೆ ನೀಡಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ರಬ್ಬರ್ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ರಬ್ಬರ್ ಉತ್ಪಾದನಾ ವೆಚ್ಚವು ಬೇಡಿಕೆಯ ಬೆಲೆಗಿಂತ ಹೆಚ್ಚಿದೆ. ಇದರಿಂದ ಕೃಷಿಕರು ತೀವ್ರ ತೊಂದರೆಗೊಳಗೆ ಒಳಗಾಗಿದ್ದಾರೆ. ಕೃಷಿ ಬೆಳೆಗಳ ಪಟ್ಟಿಯಿಂದ ನೈಸರ್ಗಿಕ ರಬ್ಬರ್ ಹೊರಗಿಡಲಾಗಿದೆ. ಹಾಗಾಗಿ ರಬ್ಬರ್‌ಗೆ ಯಾವುದೇ ಬೆಂಬಲ ಬೆಲೆ ನೀಡುತ್ತಿಲ್ಲ. ಕೇಂದ್ರ ಕೃಷಿ ರಾಜ್ಯ ಸಚಿವರು ಲೋಕಸಭೆಯಲ್ಲಿ ನೈಸರ್ಗಿಕ ರಬ್ಬರನ್ನು ಕೃಷಿ ಉತ್ಪನ್ನವೆಂದು ಪರಿಗಣಿಸಲಾಗುವುದಿಲ್ಲ. ಇದನ್ನು ಕೈಗಾರಿಕಾ ಉದ್ದೇಶಕ್ಕಾಗಿ ಕಚ್ಚಾ ವಸ್ತುವಾಗಿ ಮಾತ್ರ ಬಳಸಲಾಗುತ್ತದೆ ಎಂದು ಉತ್ತರಿಸಿದ್ದರು. ವಾಣಿಜ್ಯ ಇಲಾಖೆಯು 2019ರಲ್ಲಿ ರಾಷ್ಟ್ರೀಯ ರಬ್ಬರ್ ನೀತಿಯನ್ನು ಹೊರತಂದಿದೆ. ಆದರೆ ಅದರಲ್ಲಿನ ನ್ಯೂನ್ಯತೆಗಳಿಂದಾಗಿ ಬೆಳೆಗಾರರಿಗೆ ಪ್ರಯೋಜನವಾಗಿಲ್ಲ. ರಬ್ಬರ್ ಉದ್ಯಮದ ಮೇಲೆ ಕೇಂದ್ರ ಸರಕಾರ ಏಕೀಕೃತ ಮತ್ತು ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದರಿಂದ ಕೇಂದ್ರ ಸರಕಾರ ಮಾತ್ರ ರಬ್ಬರ್ ಕೃಷಿಕರ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ನೈಸರ್ಗಿಕ ರಬ್ಬರನ್ನು ಕಡ್ಡಾಯ ಕೃಷಿ ಬೆಳೆಗಳ ಪಟ್ಟಿಗೆ ಸೇರಿಸಲು ಮತ್ತು ಗರಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಸಚಿವ ದಿನೇಶ್ ಗುಂಡುರಾವ್ ಪತ್ರದಲ್ಲಿ ವಿನಂತಿಸಿದ್ದಾರೆ.