×
Ad

ಶಿಕ್ಷಣ ಸಂಸ್ಥೆಗಳ ಪರಿಸರದ ಅಂಗಡಿಗಳ ತಪಾಸಣೆ ತೀವ್ರಗೊಳಿಸಲು ದ.ಕ. ಡಿಸಿ ಸೂಚನೆ

Update: 2026-01-20 22:55 IST

ಮಂಗಳೂರು: ಶಾಲಾ ಕಾಲೇಜುಗಳ ಆಸುಪಾಸಿನಲ್ಲಿ ಕಾರ್ಯಾಚರಿಸುವ ಅಂಗಡಿಗಳಲ್ಲಿ ಮಾದಕ ವಸ್ತು ಮತ್ತು ಧೂಮಪಾನ ಮಾರಾಟದ ಬಗ್ಗೆ ನಿರಂತರ ತಪಾಸಣೆ ನಡೆಸುವಂತೆ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.

ನಗರದ ಪುರಭವನದಲ್ಲಿ ಮಂಗಳವಾರ ನಡೆದ ನಾರ್ಕೋ ಕೋ ಆರ್ಡಿನೇಶನ್ ಸೆಂಟರ್‌ನ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ ನಡೆಸಬೇಕು. ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷೆ ಒತ್ತಡದಿಂದಾಗಿ ಮಾದಕ ವಸ್ತುಗಳನ್ನು ಸೇವಿಸುವ ಬಗ್ಗೆ ವರದಿ ಬಂದಿದೆ. ಈ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದರು.

ಪದವಿಪೂರ್ವ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲು ನಿರ್ಲಕ್ಷ್ಯ ವಹಿಸಿದ ಬಗ್ಗೆ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಡ್ರಗ್ಸ್ ಪರೀಕ್ಷೆಯನ್ನು ಹೆಚ್ಚಿಸಲು ಆರೋಗ್ಯ ಇಲಾಖೆಗೆ ಹೆಚ್ಚಿನ ಕಿಟ್‌ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಾರ್ವಜನಿಕರಲ್ಲಿ ಡ್ರಗ್ಸ್ ಮುಕ್ತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ನಗರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಡ್ರಗ್ಸ್ ಸೇವಿಸಿದ 62 ಮಂದಿಯನ್ನು ಹಾಗೂ 21 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೋಂಸ್ಟೇ ಮತ್ತು ಲಾಡ್ಜ್‌ಗಳಲ್ಲಿ ಆಗ್ಗಿಂದಾಗೆ ತಪಾಸಣೆ ನಡೆಸಬೇಕು. ಕರಾವಳಿ ಭದ್ರತಾ ಪೊಲೀಸರು ಬೋಟ್‌ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪಾರ್ಸೆಲ್‌ಗಳ ಮೇಲೆ ನಿಗಾ ವಹಿಸಬೇಕು. ಕೈಗಾರಿಕಾ ಘಟಕಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸ ಬೇಕು. ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮೆಡಿಕಲ್‌ಗಳಲ್ಲಿ ಔಷಧದ ಮಾರಾಟದ ಬಗ್ಗೆ ಸೂಕ್ತ ದಾಖಲೆಯನ್ನು ನಿರ್ವಹಿಸದ ನಾಲ್ಕು ಮೆಡಿಕಲ್‌ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್., ಎಎಸ್‌ಪಿ ಅನಿಲ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News