ಡಿ.13ರಂದು ಕಡಬದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಸಮ್ಮೇಳನ
ಮಂಗಳೂರು, ಡಿ.10: ವಿಜಯ್ ದಿವಸ್ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ(ರಿ)ದ ದ.ಕ. ಜಿಲ್ಲಾ ಸಮ್ಮೇಳನ ಡಿ.13ರಂದು ಕಡಬದ ನೆಲ್ಯಾಡಿಯ ಬಿರ್ವಾ ಸಭಾಂಗಣದಲ್ಲಿ ಬೆಳಗ್ಗೆ 9:30ರಿಂದ ನಡೆಯಲಿದೆ ಎಂದು ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ನೋಬರ್ಟ್ ರೋಡ್ರಿಗಸ್ ತಿಳಿಸಿದ್ದಾರೆ.
ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ವೀರ ನಾರಿಯರು, ಬಂಟ್ವಾಳ, ಕಡಬ, ಬೆಳ್ತಂಗಡಿ, ಪುತ್ತೂರು ಮತ್ತು ಮಂಗಳೂರು ತಾಲೂಕುಗಳ ಧುರೀಣರು, ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
1971ರಲ್ಲಿ ಇಂಡೋ- ಪಾಕ್ ಯುದ್ಧದಲ್ಲಿ ಭಾಗಿಯಾದ ದ.ಕ. ಜಿಲ್ಲೆಯ ಯೋಧರಿಗೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಗುವುದು. ಈ ಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್. ಕೆ , ಮಹಾ ಪೋಷಕರಾದ ಮಾಜಿ ಸಂಸದೆ ಡಾ. ತೇಜಸ್ವಿನಿ ಗೌಡ , ವಿಶೇಷ ಆಹ್ವಾನಿತರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ , ಪುತ್ತೂರು ಸಹಾಯಕ ಆಯುಕ್ತ ಸ್ಟೇಲ್ಲಾ ವರ್ಗೀಸ್, ಇಸಿಎಚ್‌ಎಸ್ ಆಯುಕ್ತ ಕರ್ನಲ್ ನಿತಿನ್ ಭಿಡೆ , ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್ ಗೌಡ ಭಾಗವಹಿಸಲಿದ್ದಾರೆ.
ರಾಜ್ಯ ಘಟಕದ ದ.ಕ. ಹಾಗೂ ಉಡುಪಿ ಜಿಲ್ಲಾ ಸಂಚಾಲಕ ಮ್ಯಾಥ್ಯೂ ಟಿ.ಜಿ ಮಾತನಾಡಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತ ಪರಿಹಾರ ಕಂಡುಕೊಳ್ಳಲು 2020, ಸೆ.21ರಂದು ಆರಂಭಗೊಂಡ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ಇದೀಗ ರಾಜ್ಯದ 24 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಆರಂಭಿಸಿದ್ದು, ಸಂಘದಲ್ಲಿ 1.41 ಲಕ್ಷ ಮಂದಿ ಸದಸ್ಯರಿದ್ದಾರೆ. 350ಮಂದಿ ದ.ಕ. ಜಿಲ್ಲಾ ಘಟಕ ಸದಸ್ಯತ್ವ ಪಡೆದಿದ್ದಾರೆ. ಮಾಜಿ ಸೈನಿಕರ ಸಮಸ್ಯೆಗಳಾದ ಪುನರ್ವಸತಿ , ಉದ್ಯೋಗ, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರತವಾಗಿದೆ ಎಂದು ಮಾಹಿತಿ ನೀಡಿದರು .
ಎಲ್ಲಾ ಜಿಲ್ಲೆಗಳಲ್ಲಿ ಯುದ್ಧ ಸ್ಮಾರಕ ಹಾಗೂ ಅಮರ್ ಜವಾನ್ ಜ್ಯೋತಿ ಸ್ಥಾಪನೆ, ಸೈನಿಕರಿಗೆ ಸಮಾಜದಲ್ಲಿ ಉತ್ತಮ ಗೌರವವನ್ನು ದೊರಕಿಸಿ ಕೊಡುವಲ್ಲಿ ಪ್ರಯತ್ನಿಸುತ್ತಿದೆ. ಮಾಜಿ ಸೈನಿಕರ ಹಕ್ಕುಗಳನ್ನು ಪಡೆಯಲು ಮತ್ತು ಸರಕಾರದಿಂದ ದೊರೆಯುವ ನ್ಯಾಯಯುತ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಸಂಘ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಈ ಸಮ್ಮೇಳನದಲ್ಲಿ ಮಾಜಿ ಸೈನಿಕರ ಸಂಘದ ಬಲವರ್ಧನೆಯೊಂದಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಘದ ಕಡಬ ತಾಲೂಕು ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಘಟಕದ ಕೋಶಾಧಿಕಾರಿ ಚಂದಪ್ಪ ಡಿಎಸ್, ಬಂಟ್ವಾಳ ಘಟಕದ ಉಪಾಧ್ಯಕ್ಷ ಧನಂಜಯ ನಾಯ್ತೋಟು, ಬೆಳ್ತಂಗಡಿ ಘಟಕದ ಅಧ್ಯಕ್ಷ ತಂಗಚ್ಚನ್ , ಪುತ್ತೂರು ಘಟಕದ ಅಧ್ಯಕ್ಷ ಗೋಪಾಲ ವಿ ಬನ್ನೂರು ಉಪಸ್ಥಿತರಿದ್ದರು.