×
Ad

ನ್ಯಾಯ ಸಿಗದಿದ್ದರೆ ದೆಹಲಿ-ಮಣಿಪುರ ಚಲೋ: ಸ್ಟ್ಯಾನಿ ಪಿಂಟೋ

Update: 2023-07-27 19:35 IST

ಮಂಗಳೂರು, ಜು.27: ಮಣಿಪುರದಲ್ಲಿ ಹರಿದಿರುವುದು ಕೇವಲ ಕಣ್ಣೀರಲ್ಲ, ರಕ್ತದ ಕಣ್ಣೀರಾಗಿದೆ. ಹಾಗಾಗಿ ಅಲ್ಲಿ ಹರಿದಿರುವ ಪ್ರತಿಯೊಬ್ಬರ ಆ ಕಣ್ಣೀರಿಗೂ ಬೆಲೆ ಇದೆ. ಆ ಬೆಲೆಯು ಒಂದಲ್ಲೊಂದು ದಿನ ಬಂದೇ ಬರಲಿದೆ. ಹಾಗಾಗಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಒಂದು ವೇಳೆ ಕೇಂದ್ರ ಸರಕಾರ ಮಣಿಪುರದ ಹಿಂಸಾಚಾರವನ್ನು ನಿಲ್ಲಿಸದಿದ್ದರೆ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ನೀಡದಿದ್ದರೆ ದೆಹಲಿ ಮತ್ತು ಮಣಿಪುರ ಚಲೋ ನಡೆಸಲಾಗುವುದು ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಎಚ್ಚರಿಕೆ ನೀಡಿದರು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ನೇತೃತ್ವದಲ್ಲಿ ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗ, ಕ್ರೈಸ್ತ ಐಕ್ಯತೆಯ ಆಯೋಗ, ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್‌ನ ಸಹಭಾಗಿತ್ವಲ್ಲಿ ನಗರದ ಪುರಭವನದ ಮುಂದೆ ಗುರುವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಣಿಪುರ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಬೆತ್ತಲೆಯಾಗಿದ್ದಾರೆ. ಅಲ್ಲಿನ ಹಿಂಸಾಚಾರ, ದೌರ್ಜನ್ಯದ ವಿರುದ್ಧ ಜಗತ್ತಿನಾದ್ಯಂತ ನಾಗರಿಕರು ಧ್ವನಿ ಎತ್ತಿದ ಬಳಿಕ ಪ್ರಧಾನಿ ತುಟಿಬಿಚ್ಚಿರುವುದು ವಿಪರ್ಯಾಸ. ಪ್ರಧಾನಿಯ ಕ್ರಮದ ಬಗ್ಗೆ ನಮಗೆ ಯಾವುದೇ ಭರವಸೆ ನಮಗಿಲ್ಲ. ಹಾಗಾಗಿ ಹೋರಾಟ ಮುಂದುವರಿಸಲಿದ್ದೇವೆ. ಅಲ್ಲಿ ಕೆಡವಲ್ಪಟ್ಟ ಮನೆ, ಶಾಲೆಗಳನ್ನು ಮತ್ತೆ ಅಲ್ಲೇ ಕಟ್ಟುವೆವು. ಆ ಮೂಲಕ ಇತಿಹಾಸವನ್ನು ಸೃಷ್ಟಿಸುವೆವು ಎಂದು ಸ್ಟ್ಯಾನಿ ಪಿಂಟೋ ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಮಾತನಾಡಿ ‘ಗುಜರಾತ್ ಮಾದರಿ ತೋರಿಸಿದ್ದ ಮೋದಿ ಇದೀಗ ಮಣಿಪುರ ಮಾದರಿ ಮಾಡಲು ಹೊರಟಿದ್ದಾರೆ. ಇದಕ್ಕೆ ಎಂದೂ ಅವಕಾಶ ನೀಡಬಾರದು. ಆಡಳಿತ ವ್ಯವಸ್ಥೆಯ ಮುಂದೆ ನಡೆದ ಕ್ರೂರ ಕೃತ್ಯವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಮಹಿಳೆಯರನ್ನೇ ಗುರಿಯಾಗಿಸಿಕೊಂಡು ನಡೆಯುವ ಇಂತಹ ದೌರ್ಜನ್ಯದ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳಬೇಕಿದೆ ಎಂದರು.

ರಾಜ್ಯ ದಾರಿಮೀಸ್ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಮಾತನಾಡಿ ‘ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಪ್ರತಿಭಟನೆಗಳು ಒಳ್ಳೆಯ ದಿಲ್ಲ. ಆದರೆ ಮಣಿಪುರ ಸಹಿತ ದೇಶಾದ್ಯಂತ ನಡೆಯುವ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸದೆ ಸುಮ್ಮನಿರಲು ಸಾಧ್ಯವೂ ಇಲ್ಲ. ಸೌಹಾರ್ದ ಬಯಸುವ ದೇಶದ ಹಿಂದೂ, ಮುಸ್ಲಿಂ, ಕ್ರೈಸ್ತರು ಒಗ್ಗೂಡುವ ಮೂಲಕ ವಿಭಜನಾ ಶಕ್ತಿಗಳನ್ನು ಮಣಿಸಬೇಕಿದೆ ಎಂದರು.

ಮಣಿಪುರ ದೌರ್ಜನ್ಯದ ಪ್ರತ್ಯಕ್ಷ ಸಾಕ್ಷಿ, ಪಿಯು ವಿದ್ಯಾರ್ಥಿ ಡೇವಿಡ್ ಘಟನೆಯ ಬಗ್ಗೆ ವಿವರಿಸಿದರಲ್ಲದೆ ಅಲ್ಲಿ ಹಿಂಸಾಚಾರ ಕೊನೆಗೊಳ್ಳಬೇಕು. ಅದಕ್ಕಾಗಿ ದೇಶದ ಜನತೆ ಒಗ್ಗೂಡಬೇಕು ಎಂದು ಮನವಿ ಮಾಡಿದರು.

ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ಮೋನ್ಸಿಜೋರು ಮ್ಯಾಕ್ಸಿಮ್ ನೊರೊನ್ಹಾ, ಮಾಜಿ ಸಚಿವ ರಮಾನಾಥ ರೈ, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ಅವಂಡಾ ಜೆ.ಬಿ. ಸಲ್ದಾನ, ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಡಿಸೋಜ, ಮಾಜಿ ಅಧ್ಯಕ್ಷ ಪೌಲ್ ರೋಲ್ಫಿ ಡಿಕಾಸ್ತ, ಉಪಾಧ್ಯಕ್ಷ ಲಾರೆನ್ಸ್ ಡಿಸೋಜ, ಕಾರ್ಯದರ್ಶಿ ವಿಲ್ಮಾ ಮೊಂತೆರೋ, ಕೋಶಾಧಿಕಾರಿ ಫ್ರಾನ್ಸಿಸ್ ಮೊಂತೆರೋ, ಸಹ ಕೋಶಾಧಿಕಾರಿ ಸಂತೋಷ್ ಡಿಸೋಜ, ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೋ, ಮಂಗಳೂರು ಧರ್ಮಪ್ರಾಂತದ ಪಾಲನಾ ಸಮಿತಿಯ ಕಾರ್ಯದರ್ಶಿ ಜಾನ್ ಡಿಸಿಲ್ವಾ, ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್‌ನ ಕಾರ್ಯದರ್ಶಿ ರೂಪೇಶ್ ಮಾಡ್ತಾ, ರೆ. ಪ್ರಭುರಾಜ್, ರೆ. ಸಂದೀಪ್ ಥಿಯೋಪಲ್, ಜೆ.ಬಿ. ಕ್ರಾಸ್ತ, ಅನಿತಾ ಡೇಸ್ ಫ್ರಾಂಕ್, ಆಲ್ಫೆಡ್ ಮನೋಹರ್, ಜಮಾಅತೆ ಇಸ್ಲಾಮೀ ಹಿಂದ್‌ನ ದ.ಕ.ಜಿಲ್ಲಾ ಸಂಚಾಲಕರಾದ ಅಮೀನ್ ಹಸನ್, ಗಫೂರ್ ಕುಳಾಯಿ, ಜಮಾಅತೆ ಇಸ್ಲಾಮೀ ಹಿಂದ್‌ನ ಮಹಿಳಾ ವಿಭಾಗದ ದ.ಕ.ಜಿಲ್ಲಾಧ್ಯಕ್ಷೆ ಸಾಜಿದಾ ಮೂಮಿನ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್‌ನ ದ.ಕ.ಜಿಲ್ಲಾಧ್ಯಕ್ಷ ನಿಝಾಮುದ್ದೀನ್ ಉಮರ್, ಎಸ್‌ಐಒ ದ.ಕ.ಜಿಲ್ಲಾಧ್ಯಕ್ಷ ಆಸಿಫ್, ಜಿಐಒ ದ.ಕ. ಜಿಲ್ಲಾಧ್ಯಕ್ಷೆ ಆಶ್ಮಿನಾ ಬೆಂಗರೆ, ಐವನ್ ಮೊಂತೆರೋ, ನಿತೇಶ್ ಡಿಸೋಜ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಎಸ್‌ಡಿಪಿಐ ಮುಖಂಡ ಆಲ್ಫನ್ಸೋ ಫ್ರಾಂಕೋ, ಸುನೀಲ್ ಬಜಾಲ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News