ಕುಪ್ಪೆಪದವು–ಇರುವೈಲು ಮಾರ್ಗದಲ್ಲಿ ಸರಕಾರಿ ಬಸ್ ಸಂಚಾರಕ್ಕೆ ಆಗ್ರಹ
ಬಜ್ಪೆ : ಕುಪ್ಪೆಪದವು–ಇರುವೈಲು ಮಾರ್ಗದಲ್ಲಿ ಸರಕಾರಿ ಬಸ್ ಸಂಚಾರ ಪ್ರಾರಂಭಿಸಲು ಆಗ್ರಹಿಸಿ, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಮಂಗಳೂರು ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕುಪ್ಪೆಪದವು ಗ್ರಾಮದ ಜನತೆ ಸರಿಯಾದ ಬಸ್ ಸೇವೆಯಿಂದ ವಂಚಿತರಾಗಿದ್ದಾರೆ. ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದರೂ ಅವುಗಳ ಸಂಖ್ಯೆ ತುಂಬಾ ಕಡಿಮೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರು ಕೈಕಂಬ, ಮಂಗಳೂರು ಹಾಗೂ ಮೂಡಬಿದ್ರೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಬಸ್‌ಗಳಲ್ಲಿ ತೀವ್ರ ನೂಕುನುಗ್ಗಲು ಉಂಟಾಗುತ್ತಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಪ್ರಯಾಣ ಕಷ್ಟಕರವಾಗಿದೆ. ಮಧ್ಯಾಹ್ನ ಮತ್ತು ರಜಾದಿನಗಳಲ್ಲಿ ಕೊನೆಯ ಟ್ರಿಪ್‌ಗಳನ್ನು ಖಾಸಗಿ ಬಸ್‌ಗಳು ರದ್ದುಗೊಳಿಸುವುದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದೇ ವೇಳೆ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಗ್ರಾಮದಲ್ಲಿನ ಮಹಿಳೆಯರು ಪಡೆಯಲು ಸಾಧ್ಯವಾಗದಿರುವುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅದರ ಹಿನ್ನೆಲೆಯಲ್ಲಿ ಮಂಗಳೂರು–ಕುಪ್ಪೆಪದವು–ಇರುವೈಲು–ಮೂಡಬಿದ್ರೆ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ಕನಿಷ್ಠ ಎರಡು ಬಸ್‌ಗಳನ್ನು ನಿಯೋಜಿಸಬೇಕೆಂದು ಸಂಘದ ವತಿಯಿಂದ ಬೇಡಿಕೆ ಇಟ್ಟಿದೆ.
ಮನವಿ ನೀಡಿದ ನಿಯೋಗದಲ್ಲಿ ಕುಪ್ಪೆಪದವು ವಲಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು, ಅಧ್ಯಕ್ಷ ದಿನೇಶ್ ಇರುವೈಲು, ಕೋಶಾಧಿಕಾರಿ ಜನಾರ್ದನ ಗೌಡ ಎಡಪದವು, ಪದಾಧಿಕಾರಿಗಳಾದ ಭಾಸ್ಕರ ಶೆಟ್ಟಿ ಮುತ್ತೂರು, ಇಬ್ರಾಹಿಂ, ಭವಾನಿ ಕುಪ್ಪೆಪದವು, ಗಣೇಶ್ ಕಾಪಿಕಾಡ್ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಇತರ ಮುಖಂಡರು ಉಪಸ್ಥಿತರಿದ್ದರು.