×
Ad

ಧರ್ಮಸ್ಥಳ ಘರ್ಷಣೆ: ಬೆಳ್ತಂಗಡಿ, ಧರ್ಮಸ್ಥಳ ಠಾಣೆಗಳಲ್ಲಿ ಪ್ರಕರಣಗಳು ದಾಖಲು

► ಸುವರ್ಣ ಚಾನೆಲ್‌, ವರದಿಗಾರನ ವಿರುದ್ಧವೂ ಪ್ರಕರಣ ದಾಖಲು

Update: 2025-08-07 14:16 IST

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ಕ್ರಾಸ್ ಎಂಬಲ್ಲಿ ಬುಧವಾರ ನಡೆದ ಯುಟ್ಯೂಬರ್ ಗಳ ಮೇಲಿನ ಹಲ್ಲೆ ಘರ್ಷಣೆ ಹಾಗೂ ವಾಹನಗಳನ್ನು ಜಖಂಗೊಳಿಸಿದ ಘಟನೆ ಹಾಗೂ ಅದರ ಬೆನ್ನಲ್ಲೇ ಉಜಿರೆಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಪ್ರಕರಣಗಳನ್ನು ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ಧಾರೆ.

ಧರ್ಮಸ್ಥಳ ಠಾಣೆಯಲ್ಲಿ ಯುಟ್ಯೂಬರ್ ಗಳ ಮೇಲಿನ ಹಲ್ಲೆ ವಾಹನಗಳು ಜಖಂಗೊಳಿಸಿದ್ದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಿಸಲಾಗಿದೆ.

ಯೂಟ್ಯೂಬರ್ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಾದ ಬಂಟ್ವಾಳ ನಿವಾಸಿ ಕುಡ್ಲ ರಾಂಪೇಜ್ ನ ಅಜಯ್ ಎಂಬವರು ದೂರು ನೀಡಿದ್ದಾರೆ. ಬುಧವಾರ ಸಂಜೆ ವೇಳೆ ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ, ವ್ಯಕ್ತಿಯೋರ್ವರೊಂದಿಗೆ ವಿಡಿಯೊ ಬೈಟ್ ಪಡೆಯುತ್ತಿದ್ದಾಗ, ಸ್ಥಳಕ್ಕೆ ಬಂದ ಸುಮಾರು 15 ರಿಂದ50 ಮಂದಿ ಕಿಡಿಗೇಡಿಗಳ ಗುಂಪು ತನ್ನ ಮೇಲೆ ಹಾಗೂ ಕ್ಯಾಮರಾ ಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೋ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾ ಅಭಿಷೇಕ್ ಎಂಬವರಿಗೆ ಹಲ್ಲೆ ನಡೆಸಿ, ಕ್ಯಾಮರಾವನ್ನು ರಸ್ತೆಗೆಸೆದು ಹಾನಿಗೊಳಿಸಿ, ಅದರಲ್ಲಿದ್ದ ಮೆಮೊರಿ ಕಾರ್ಡ್ ಕಳವು ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 46/2025 ಕಲಂ: 189(2), 191(2), 115(2), 324(5) , 352, 307 ಜೊತೆಗೆ 190 ಬಿ.ಎನ್‌.ಎಸ್‌- 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಮತ್ತೊಂದು ಪ್ರಕರಣದಲ್ಲಿ ಬುಧವಾರ ಸಂಜೆ, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ಕ್ರಾಸ್ ನಲ್ಲಿ ಸುಮಾರು 25 ರಿಂದ 50 ಜನರು, ಎರಡು ಪ್ರತ್ಯೇಕ ಗುಂಪುಗಳಾಗಿ ಸೇರಿ ಘರ್ಷಣೆ ನಡೆಸಿದ್ದು, ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸ್‌ ಠಾಣಾ ಉಪ ನಿರೀಕ್ಷಕರು ಹಾಗೂ ಇತರ ಪೊಲೀಸ್ ಅಧಿಕಾರಿಗಳ ಸೂಚನೆಯನ್ನೂ ಮೀರಿ ಅಲ್ಲಿಯೇ ನಿಂತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿ, ಸೇರಿದ್ದ ಗುಂಪುಗಳು ಪರಸ್ಪರ ಗಲಾಟೆ ನಡೆಸಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 47/2025 ಕಲಂ: 189(2), 191(2), 132, 324(6) ಜೊತೆಗೆ 190 ಬಿಎನ್‌ ಎಸ್‌ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯ ಆವರಣದಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಗುಂಪು ಸೇರಿ ಧರಣಿ ನಡೆಸಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2025 ಕಲಂ: 189(2) ಜೊತೆಗೆ 190 ಬಿಎನ್‌ ಎಸ್‌ ನಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಾಲ್ಕನೆಯ ಪ್ರಕರಣದಲ್ಲಿ ಬುಧವಾರ ಸಂಜೆಯ ವೇಳೆ ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ ವಾಹನಗಳನ್ನು ಜಖಂಗೊಳಿಸಿ ಪ್ರಮೋದ್ ಕುಮಾರ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯೂಟ್ಯೂಬರ್ಸ್‌ಗಳಿಗೆ ಹಲ್ಲೆ ನಡೆದಿರುವ ವಿಚಾರ ತಿಳಿದು ಸ್ಥಳಕ್ಕೆ ಬಂದ ಬೆಳ್ತಂಗಡಿ ನಿವಾಸಿ ಪ್ರಮೋದ್‌ ಕುಮಾರ್ ಶೆಟ್ಟಿ (42) ಎಂಬವರಿಗೆ, ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ‌ ಬೈದು, ಹಲ್ಲೆ ನಡೆಸಿರುವುದಾಗಿ ಹಾಗೂ ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಕ್ಕೆ ಹಾನಿಗೊಳಿಸಿರುತ್ತಾರೆ ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 49/2025 ಕಲಂ: 189(2), 191(2), 115(2), 110, 324(3), 352, 351(2) ಜೊತೆಗೆ 190 ಬಿಎನ್‌ ಎಸ್‌ ರಂತೆ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಹಲ್ಲೆ ಘಟನೆಯ ಬೆನ್ನಲ್ಲೇ ಹಲ್ಲೆಗೆ ಒಳಗಾದವರು ದಾಖಲಾಗಿದ್ದ ಆಸ್ಪತ್ರೆಯ ಸಮೀಪ ಗುಂಪು ಸೇರಿ ಘರ್ಷಣೆಗೆ ಕಾರಣವಾದ ಬಗ್ಗೆ ಹಾಗು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಅಕ್ರಮಕೂಟ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವವರ ಬಗ್ಗೆ ಬೆಳ್ತಂಗಡಿ ಠಾಣೆಯ ಪೊಲೀಸರು ಅಕ್ರ: 77/2025 ಕಲಂ:Sec 189(2)r/ w 190 BNS ಬಿಎನ್ಎಸ್ -2023 ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದಲ್ಲದೆ ಸುವರ್ಣ ಸುದ್ದಿವಾಹಿನಿಯ ವರದಿಗಾರ ಹರೀಶ್ ನೀಡಿರುವ ದೂರಿನಂತೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗು ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಇದೆ ಘಟನೆಗೆ ಸಂಬಂಧಿಸಿದಂತೆ ಗಣೇಶ್ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಸುವರ್ಣ ಸುದ್ದಿವಾಹಿನಿಯ ವರದಿಗಾರನ ವಿರುದ್ದ ಹಾಗೂ ಸುವರ್ಣ ಚಾನೆಲ್ ವಿರುದ್ದ 76/2025 ಕಲಂ:126(2), 296, 351 ಜೊತೆಗೆ 3(5) ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News