ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿ-25 ಪ್ರಶಸ್ತಿಗೆ ದಿನೇಶ್ ಪೈ ಆಯ್ಕೆ
ಮಂಗಳೂರು, ಜ.5: ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು (ಬಿಎಸ್‌ಡಬ್ಲ್ಯುಟಿ) ಇದರ 2025ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಹಿರಿಯ ಸಮಾಜ ಸೇವಕ ಉಡುಪಿ ಮೂಲದ ದಿನೇಶ್ ಪೈ ಅವರನ್ನು ಆಯ್ಕೆ ಮಾಡಲಾಗಿದೆ.
ದಿನೇಶ್ ಪೈ ಸರಕಾರದ ಸಹಾಯಧನ ಮತ್ತು ದಾನಿಗಳ ನೆರವಿನಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. 18 ವರ್ಷಗಳಿಂದ ಸುಮಾರು 700ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಗಳನ್ನು ವಿತರಿಸಿದ್ದಾರೆ. ಕಡುಬಡವರಿಗೆ, ವಿಶಿಷ್ಟ ಚೇತನರಿಗೆ, ವೃದ್ಧರಿಗೆ ಸಹಾಯ ಮಾಡುತ್ತಾರೆ. ಅಪಘಾತಗೊಂಡ ಆರ್ಥಿಕವಾಗಿ ಹಿಂದುಳಿದವರಿಗೆ 15 ದಿನಗಳವರೆಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಾರೆ. ಬೇಸಿಗೆಯ ವೇಳೆ ನೀರಿನ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಮಾಡಿದ್ದಾರೆ. ಕೊರೋನಾ ಸಂದರ್ಭ ಅರ್ಹ ಕುಟುಂಬಗಳಿಗೆ ದಾನಿಗಳಿಂದ ಹಣ ಸಂಗ್ರಹಿಸಿ ಆಹಾರ ಕಿಟ ವಿತರಿಸಿದ್ದಾರೆ. ತನ್ನ ವ್ಯಾಪ್ತಿಯಲ್ಲಿ ಈವರೆಗೆ 400ಕ್ಕೂ ಅಧಿಕ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಕೆಲಸ ಮಾಡಿದ್ದಾರೆ.
2008ರಲ್ಲಿ ಆರಂಭವಾದ ಇವರ ಸಮಾಜ ಸೇವೆಯಲ್ಲಿ ಮುಖ್ಯವಾಗಿ ಪ್ರತಿ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಗರಸಭೆಯಲ್ಲಿ ಲಭ್ಯರಿರುತ್ತಾರೆ. ಅಲ್ಲಿಗೆ ಬರುವ ಎಲ್ಲರಿಗೂ ತನ್ನಿಂದಾಗುವ ಸೇವೆಯನ್ನು ಉಚಿತವಾಗಿ ನೀಡುತ್ತಾರೆ. 75 ವರ್ಷ ವಯಸ್ಸಿನ ಇವರು ಪ್ರತಿದಿನ ಪ್ರತಿ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗನ್ನು ಆಲಿಸಿ ಪರಿಹಾರ ಸೂಚಿಸುತ್ತಾರೆ. ಊರಿನ ಅರ್ಹರಿಗೆ ಸರಕಾರದ ಸೌಲಭ್ಯವನ್ನು ತಲುಪಿಸುವ ಪ್ರಯತ್ನ ಮಾಡುತ್ತಾರೆ. ಎಲೆಮರೆಯ ಕಾಯಿಯಂತೆ ಇಷ್ಟು ವರ್ಷಗಳ ಕಾಲ ಇವರು ಮಾಡಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ 2025 ನೇ ಸಾಲಿನ ಆಖ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು 25 ಸಾವಿರ ರೂ ನಗದು ಮತ್ತು ಸನ್ಮಾನ ಪತ್ರ, ಫಲಕ ಇತ್ಯಾದಿ ಒಳಗೊಂಡಿರುತ್ತದೆ.
ಜ.24ರಂದು ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ 200 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಹಾಗೂ ಬಿಎಸ್‌ಡಬ್ಲ್ಯುಟಿ ದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯದರ್ಶಿ ಆಕಿಫ್ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.