ದ.ಕ. : ಜಿ.ಪಂ.ನ ತ್ಯಾಜ್ಯ ಸಂಗ್ರಾಹಕರಿಗೆ ನೇರ ಪಾವತಿಗೆ ಒತ್ತಾಯ
ಮಂಗಳೂರು, ಜೂ.20: ಜಿಲ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 200ರಷ್ಟು ಪೌರ ಕಾರ್ಮಿಕರು ಹಾಗೂ ಕಸ ಸಾಗಿಸುವ ವಾಹನ ಚಾಲಕರು ಕನಿಷ್ಟ ವೇತನ, ಪಿಎಫ್ ಹಾಗೂ ಇತರ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದು, ಅವರಿಗೆ ನೇರ ನೇಮಕಾತಿ, ನೇರ ಪಾವತಿಯ ವ್ಯವಸ್ಥೆ ಮಾಡಬೇಕು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಒತ್ತಾಯ ಮಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಗ್ರಾಪಂ ವತಿಯಿಂದ ಸರಕಾರ ನಿಗದಿಪಡಿಸಿದ ಕನಿಷ್ಟ ವೇತನವನ್ನು ಸಂಜೀವಿನಿ ಒಕ್ಕೂಟಕ್ಕೆ ಪಾವತಿಸಸಲಾಗ್ತಿದ್ದು, ಒಕ್ಕೂಟದ ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ದಿನಕ್ಕೆ ಕೇವಲ 300ರಿಂದ 400 ರೂ. ಮಾತ್ರ ನೀಡುತ್ತಿದ್ದಾರೆ. ಇತರ ಯಾವುದೇ ಸವಲತ್ತು ನೀಡದೆ ಬೆಳಗ್ಗಿನಿಂದ ಸಂಜೆಯವರೆಗೆ ದುಡಿಸುತ್ತಿದ್ದಾರೆ. ಅದೂ ಅಲ್ಲದೆ ಕೆಲವೆಡೆ 15ರಿಂದ 20 ದಿನಗಳ ಕೆಲಸ ಮಾತ್ರ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಉಳ್ಳಾಲ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ, ಬಂಟ್ವಾಳ, ಮೂಡಬಿದಿರೆ, ಮುಲ್ಕಿ, ಮಂಗಳೂರು ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರು ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಅವರ ಸೇವೆ ಖಾಯಂಗೊಳಸಲಾಗಿಲ್ಲ. ಹಾಗಾಗಿ ಗ್ರಾಪಂನಡಿ ಪೌರ ಕಾರ್ಮಿಕರನ್ನು ಸಂಜೀವಿನಿ ಒಕ್ಕೂ ಗುತ್ತಿಗೆ ರದ್ದುಪಡಿಸಿ ಗ್ರಾ.ಪಂಗಳೇ ನೇರವಾಗಿ ಸರಕಾರ ನಿಗದಿಪಡಿಸಿದ ಕನಿಷ್ಟ ವೇತನ ನೀಡಬೇಕು. ಖಾಯಂ ಆಗಿ ನೇಮಕ ಮಾಡುವ ಜತೆಗೆ ಇತರ ಸವಲತ್ತುಗಳನ್ನು ಒದಗಿಸುವಂತೆ ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಮೂರು ವರ್ಷದಿಂದ ನಾನು ಪುತ್ತೂರು ವ್ಯಾಪ್ತಿಯಲ್ಲಿ ಕಸ ಸಾಗಾಟದ ವಾಹನ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 15 ದಿನ ಕೆಲಸವಿದ್ದು, ಅದಕ್ಕೆ ಮಾತ್ರವೇ ವೇತನ ದೊರೆಯುತ್ತಿದೆ. ಪ್ರತಿ ಮನೆಗಳಿಂದ ಕಸ ಸಂಗ್ರಹದ ಜತೆಗೆ ಶುಲ್ಕವನ್ನು ನಾವೇ ಸಂಗ್ರಹಿಸಬೇಕು. ಇದಕ್ಕಾಗಿ ಮನೆಗಳವರಿಂದ ಅನಗತ್ಯ ಮಾತುಗಳನ್ನು ಕೇಳಬೇಕಾಗುತ್ತದೆ ಎಂದು ಪೌರ ಕಾರ್ಮಿಕರು ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಅರುಣ ಪೌಲಿನ್ ಮೊಂತೆರೋ ಅಸಮಾಧಾನ ವ್ಯಕ್ತಪಡಿಸಿದರು.
ಉಳ್ಳಾಲ ತಾಲೂಕು ಅಧ್ಯಕ್ಷೆ ವಿದ್ಯಾ ಮಾತನಾಡಿ, ಒಂದೂವರೆ ವರ್ಷದಿಂದ ವಾಹನ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಂಚಾಯತ್‌ನಿಂದ 15,000 ರೂ. ವೇತನ ನೀಡಲಾಗುತ್ತಿದೆ. ದಿನಕ್ಕೆ ಸುಮಾರು 500 ಕೆಜಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ನಮಗೆ ಮಾಸಿಕವಾಗಿ ನೀಡುವ ವೇತನದಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸರಕಾರ ಈಬಗ್ಗೆ ಗಮನ ಹರಿಸಿ ಕನಿಷ್ಟ ವೇತನದೊಂದಿಗೆ ಖಾಯಮಾತಿಗೊಳಿಸುವ ಹಾಗೂ ನೇರ ಪಾವತಿಗೆ ಅವಕಾಶ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಟಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ್, ಮೂಡಬಿದಿರೆ ತಾಲೂಕು ಅಧ್ಯಕ್ಷೆ ಜಯಂತಿ, ನಳಿನಿ, ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು.