×
Ad

ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಅಶ್ವಿನಿ ಶೆಟ್ಟಿ

Update: 2025-11-03 12:26 IST

ಮಂಗಳೂರು: ವೈದ್ಯಕೀಯ ಸೇವೆ, ಸಾಮಾಜಿಕ ಕಲ್ಯಾಣ ಮತ್ತು ಯುವ ಸಬಲೀಕರಣ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಾಗಿ ಮಂಗಳೂರು ಮೂಲದ ಡಾ.ಅಶ್ವಿನಿ ಶೆಟ್ಟಿ ಪ್ರಸಕ್ತ ಸಾಲಿನ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

ಮಂಗಳೂರಿನ ನೆಹರೂ ಮೈದಾನದಲ್ಲಿ ನ.1ರಂದು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಅಶ್ವಿನಿ ಶೆಟ್ಟಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ದಕ್ಷಿಣ ಕನ್ನಡ ಉಪ ಆಯುಕ್ತರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ವಿಸ್ತರಣೆ ಮತ್ತು ಔಟ್ ರೀಚ್ ನಿರ್ದೇಶಕಿಯಾಗಿರುವ ಡಾ.ಅಶ್ವಿನಿ ಶೆಟ್ಟಿ ಕಳೆದ 17 ವರ್ಷಗಳ ಸೇವಾ ಪಯಣದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಮಾಜಸೇವೆ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಯೆನೆಪೊಯ ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗದ ಪ್ರಾಧ್ಯಾಪಕಿಯಾಗಿರುವ ಅವರು ಅಕಾಡಮಿಕ್ ಶ್ರೇಷ್ಠತೆ ಮತ್ತು ಸಾಮಾಜಿಕ ಬದ್ಧತೆಯ ಸಮನ್ವಯದ ಮಾದರಿಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮಹಿಳೆಯರ ಆರೋಗ್ಯದ ಅರಿವು ಮೂಡಿಸುವುದು, ಕ್ಯಾನ್ಸರ್ ತಡೆ ಮತ್ತು ಮುಂಚಿತ ಪತ್ತೆ ಕುರಿತು ಜಾಗೃತಿ ಅಭಿಯಾನಗಳು, ಹಾಗೂ ಆದಿವಾಸಿ ಪ್ರದೇಶಗಳಲ್ಲಿ ಸರಕಾರದ ಅನುದಾನಿತ ರೋಗ ತಪಾಸಣೆ (NCD Screening) ಯೋಜನೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಸೇರಿದಂತೆ ಹಲವಾರು ಜನಮುಖಿ ಕಾರ್ಯಗಳಲ್ಲಿ ಅವರು ಮುಂದಿದ್ದಾರೆ.

'ಯುವ ಮನಸ್ಸುಗಳು ಬದಲಾವಣೆಯ ದೀಪಗಳು' ಎಂದು ನಂಬುವ ಡಾ. ಶೆಟ್ಟಿ ಯುವ ಶಕ್ತಿ ಮತ್ತು ಸಾಮಾಜಿಕ ಬದ್ಧತೆಯ ಹೋರಾಟಗಾರ್ತಿ. ರಾಷ್ಟ್ರೀಯ ಸೇವಾ ಯೋಜನೆ (NSS) ಕಾರ್ಯಕ್ರಮ ಸಂಯೋಜಕಿಯಾಗಿ ಅವರು ವಿದ್ಯಾರ್ಥಿಗಳನ್ನು ಅಕಾಡಮಿಕ್ ಗಡಿಗಳನ್ನು ಮೀರಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೋಗುವಂತೆ ಪ್ರೇರೇಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗ್ರಂಥಮಿತ್ರ ಯೋಜನೆ, ಶಾಲಾ ದತ್ತು ಕಾರ್ಯಕ್ರಮಗಳು, ಆರೋಗ್ಯ ಜಾಗೃತಿ ಅಭಿಯಾನಗಳು, ಮತ್ತು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅವರ ಶ್ರದ್ಧೆ, ದೃಷ್ಟಿ ಮತ್ತು ನೇತೃತ್ವವು 'Education for Transformation'ಎಂಬ ಯೆನೆಪೊಯ ವಿಶ್ವವಿದ್ಯಾನಿಲಯದ ಧ್ಯೇಯವನ್ನು ಮತ್ತಷ್ಟು ಬಲಪಡಿಸಿದೆ.

ಡಾ.ಅಶ್ವಿನಿ ಶೆಟ್ಟಿಯವರು ಅವರು ಯೆನೆಪೊಯ ವಿವಿ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ, ಪ್ರೊ ಚಾನ್ಸಲರ್ ಫರ್ಹಾದ್ ಯೆನೆಪೊಯ, ಉಪ ಕುಲಪತಿ ಡಾ.ಎಂ.ವಿಜಯಕುಮಾರ್, ರಿಜಿಸ್ಟ್ರಾರ್ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ, ಮತ್ತು ಪ್ರೊ-ವೈಸ್ ಚಾನ್ಸಲರ್ ಡಾ. ಶ್ರೀಪಥ್ ರಾವ್ ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News