ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್ ಸದಸ್ಯರಾಗಿ ಡಾ.ಯು.ಟಿ.ಇಫ್ತಿಕಾರ್ ಅಲಿ ನೇಮಕ
ಮಂಗಳೂರು: ಡಾ. ಯು.ಟಿ.ಇಫ್ತಿಕಾರ್ ಅಲಿ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ (ಆರ್ಜಿಯುಎಚ್‌ಎಸ್) ಸಿಂಡಿಕೇಟ್ ಸದಸ್ಯರಾಗಿ ಮೂರನೆ ಬಾರಿಗೆ ಕರ್ನಾಟಕ ಸರಕಾರ ನಾಮನಿರ್ದೇಶನ ಮಾಡಿದೆ.
ಮಂಗಳೂರಿನ ಡಾ. ಎಂ.ವಿ. ಶೆಟ್ಟಿ ಫಿಸಿಯೋಥೆಪಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಇಫ್ತಿಕಾರ್ ಅಲಿ ಅವರು ಆರ್ಜಿಯುಎಚ್‌ಎಸ್ನ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಅಧ್ಯಯನ ಮಂಡಳಿ ಸದಸ್ಯರಾಗಿ, ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಫಿಸಿಯೋಥೆರಪಿ ಫೆಡರೇಶನ್ನ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರು ವಿವಿಯ ಬಿಪಿಟಿ ಪದವಿ ಮತ್ತು ಸ್ನಾತಕೋತ್ತರ ಪದವಿ ಎಂಪಿಟಿ ( ಆರ್ಜಿಯುಎಚ್‌ಎಸ್ ) ಪಡೆದಿದ್ದ ಯು.ಟಿ ಇಫ್ತಿಕಾರ್ ಅಲಿ ಅವರು ಅಮೃತಸರದ ಗುರುನಾನಕ್ ದೇವ್ ವಿವಿಯಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ.
ಉಳ್ಳಾಲದ ಮಾಜಿ ಶಾಸಕ ದಿವಂಗತ ಯು.ಟಿ. ಫರೀದ್ ಪುತ್ರರಾಗಿರುವ ಯುಟಿ ಇಫ್ತಿಕಾರ್ ಅವರು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ .ಖಾದರ್ ಅವರ ಸಹೋದರ. ಇಫ್ತಿಕಾರ್ ಅವರು ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.