ಡ್ರಗ್ಸ್ ಸೇವನೆ ಪ್ರಕರಣ| 10 ವಿದ್ಯಾರ್ಥಿಗಳು ಸೇರಿ 488 ಮಂದಿ ಪಾಸಿಟಿವ್: ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು, ಸೆ. 12: ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಯನ್ನು ಬಿಗಿಗೊಳಿಸಿರುವಂತೆಯೇ, ಡ್ರಗ್ಸ್ ಸೇವನೆಗೆ ಸಂಬಂಧಿಸಿ ಕಾಲೇಜುಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದ್ದು, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ತಪಾಸಣೆಯ ಸಂದರ್ಭ 10 ಮಂದಿ ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಡ್ರಗ್ಸ್ ನಿಯಮಿತ ತಪಾಸಣೆ ಕುರಿತಂತೆ 113 ಕಾಲೇಜುಗಳು ಮುಂದೆ ಬಂದಿವೆ. ಅದರಲ್ಲಿ ಕೆಲವೊಂದು ದೂರು ಹಾಗೂ ಅನುಮಾನದ ಮೇರೆಗೆ ತಪಾಸಣೆ ನಡೆಸಲಾದ 40 ಕಾಲೇಜುಗಳಲ್ಲಿ 10 ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಕಂಡು ಬಂದಿದ್ದು ಅಗತ್ಯ ಕ್ರಮ ವಹಿಸಲಾಗಿದೆ. ಸಾರ್ವಜನಿಕವಾಗಿ ಈ ಅವಧಿಯಲ್ಲಿ 1200ಕ್ಕೂ ಅಧಿಕ ಮಂದಿಯ ತಪಾಸಣೆ ನಡೆಸಲಾಗಿದ್ದು, 478 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಕಂಡು ಬಂದಿದೆ ಎಂದು ಅವರು ಹೇಳಿದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ 73 ಮಂದಿ ಡ್ರಗ್ಸ್ ಪೂರೈಕೆದಾರನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, 37 ಮಂದಿ ಇನ್ನೂ ಜೈಲಿನಲ್ಲಿದ್ದಾರೆ. ಕಳೆದ ವರ್ಷ 160 ಜನ ಡ್ರಗ್ಸ್ ಪೂರೈಕೆದಾರರನ್ನು ಬಂಧಿಸಲಾಗಿದ್ದರೆ, ಈ ವರ್ಷ ಈವರೆಗೆ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ ಎಂದವರು ಹೇಳಿದರು.
ಎನ್‌ಡಿಪಿಎಸ್ (ಡ್ರಗ್ಸ್ ಪೂರೈಕೆ- ಸೇವನೆ )ಗೆ ಸಂಬಂಧಿಸಿ 2023ರಲ್ಲಿ 713 ಪ್ರಕರಣಗಳಲ್ಲಿ 948 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 1,71,11,700 ರೂ.ಗಳ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. 2024ರಲ್ಲಿ 1114 ಪ್ರಕರಣಗಳಲ್ಲಿ 1404 ಮಂದಿಯನ್ನು ಬಂಧಿಸಲಾಗಿದ್ದು, 82,51,99,930 ರೂ.ಗಳ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2025ರಲ್ಲಿ ಈವರೆಗೆ 477 ಪ್ರಕರಣಗಳಲ್ಲಿ 610 ಮಂದಿಯ ಬಂಧನ ಮಾಡಲಾಗಿದ್ದು, 2,04,23,650 ರೂ. ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ 4 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ವಶಪಡಿಸಿಕೊಂಡು ಅವರಿಂದ 2.5 ಕೆಜಿ ಗಾಂಜಾ ವಶಪಡಿಸಿಕೊಳ್ಳ ಲಾಗಿದೆ ಎಂದವರು ವಿವರ ನೀಡಿದರು.
ಡ್ರಗ್ಸ್ ಸೇವನೆ ಅಥವಾ ಪೂರೈಕೆಗೆ ಸಂಬಂಧಿಸಿ ಯಾವುದೇ ರೀತಿಯ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಹಾಯವಾಗುವ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸುವ ಕಾರ್ಯ ಪೊಲೀಸರಿಂದ ನಡೆದಿದೆ. ಇದರಿಂದ ಸಾಕಷ್ಟು ದೂರುಗಳು ಬಂದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಸಾರ್ವಜನಿಕರು ಕೂಡಾ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಡಿಸಿಪಿಗಳಾದ ಮಿಥುನ್ ಮತ್ತು ರವಿಶಂಕರ್ ಉಪಸ್ಥಿತರಿದ್ದರು.
ಮೋಟಾರು ವಾಹನ ಚಾಲನೆ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿ ಹಳೆ ಪ್ರಕರಣಗಳಲ್ಲಿ ಶೇ. 50ರಷ್ಟು ರಿಯಾಯಿತಿ ಯಡಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಇದರಡಿ ಆಗಸ್ಟ್ 23ರಿಂದ ಸೆ. 12ರ ಸಂಜೆಯವರೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 42600 ಮಂದಿ ದಂಡ ಪಾವತಿಸಿದ್ದಾರೆ. 1 ಕೋಟಿ 7 ಲಕ್ಷ ರೂ. ದಂಡ ಸಂಗ್ರಹವಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.
ಲಕ್ಕಿ ಸ್ಕೀಂಗಳ ಮೇಲೆ ನಿಗಾ
ಲಕ್ಕಿ ಸ್ಕೀಂಗಳ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ಸ್ಕೀಂಗಳನ್ನು ನಡೆಸುವವರ ಪರಿಶೀಲನೆ ನಡೆಸಲಾಗಿದೆ. ಸಾರ್ವಜನಿಕರಿಂದ ಮೋಸದ ಬಗ್ಗೆ ದೂರು ಬಂದಾಗ ಕ್ರಮ ವಹಿಸಲಾಗುತ್ತದೆ. ಪರಿಶೀಲನೆಯ ಸಂದರ್ಭದಲ್ಲಿಯೂ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಕಂಡು ಬಂದಾಗ ಅಂತಹವರ ಮೇಲೆ ಕ್ರಮ ಆಗಲಿದೆ. ಕೆಲವೊಂದು ಸಂಸ್ಥೆಗಳು ನೋಂದಣಿ ಆಗದೆ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.