ಶಿಕ್ಷಣದಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯ : ಯುಟಿ ಖಾದರ್
ಮಂಗಳೂರು: ಹೆತ್ತವರು ತಮ್ಮ ಮಕ್ಕಳ ಮೇಲೆ ವಿಶ್ವಾಸವಿಟ್ಟು, ಅವರಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಕುದ್ಮುಲ್ ರಂಗರಾವ್ ಸ್ಮಾರಕ ಪುರಭವನದಲ್ಲಿ ರವಿವಾರ ದಿ. ದಾಮೋದರ್ ಆರ್.ಸುವರ್ಣ ಸ್ಮಾರಕ ಬಿಲ್ಲವ ಹಾಸ್ಟೆಲ್ ಕಟ್ಟಡದ ಲೋಕಾರ್ಪಣಾ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶನವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ದುಶ್ಚಟ ಮುಕ್ತ ಮತ್ತು ದ್ವೇಷಮುಕ್ತ ಸಮಾಜವನ್ನು ಕಟ್ಟಲು ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸಂಘಟನೆಗಳು ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಹಾಸ್ಟೆಲ್ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಮೂಲಭೂತ ಶಿಕ್ಷಣ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಬಿಲ್ಲವ ಸಮುದಾಯದಿಂದ ವಿದ್ಯಾರ್ಥಿ ಗಳಿಗೆ ಹಾಸ್ಟೆಲ್ ಬಹಳ ತಡವಾಗಿ ನಿರ್ಮಾಣಗೊಂಡಿದೆ ಎಂದರು.
ಸಂಸದ ನಳಿನ್ ಕಟೀಲ್ ಅವರು ಸ್ಮರಣ ಸಂಚಿಕೆ ‘ಗುರು ಚೇತನ’ವನ್ನು ಅನಾವರಣಗೊಳಿಸಿದರು. ಅಖಿಲ ಭಾರತ ಬಿಲ್ಲವರ ಯೂನಿಯನ್(ರಿ) ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸುಶೀರ್ ಕುಮಾರ್ ಮತ್ತು ಬಾಬ ಅಲಂಕಾರ್ ಅವರನ್ನು ಸನ್ಮಾನಿಸಲಾಯಿತು.
ಶಾಸಕರಾದ ಉಮಾನಾಥ್ ಕೋಟ್ಯಾನ್, ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ,ಕಾರ್ಪೊರೇಟರ್ ಶರತ್ ಕುಮಾರ್, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್ ಸುವರ್ಣ ಉಪಸ್ಥಿತರಿದ್ದರು.