×
Ad

ಸಂವಿಧಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ: ಸ್ಪೀಕರ್ ಯು.ಟಿ. ಖಾದರ್

Update: 2024-08-30 19:51 IST

ಪುತ್ತೂರು: ದೇಶಕ್ಕೆ ಉತ್ತಮ ರಾಜಕಾರಣಿಯ ಆವಶ್ಯಕತೆಯಿದ್ದು, ನಮ್ಮ ದೇಶದಲ್ಲಿ ಕಾನೂನಿಗಿಂತ ಸಂಪ್ರದಾಯ ಬಲಿಷ್ಟ ವಾಗಿದೆ. ನಮ್ಮ ದೇಶದ ಸಂವಿಧಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ರಾಜ್ಯ ಶಾಸ್ತ್ರ ವಿಷಯವು ಬಹಳ ಆಸಕ್ತಿದಾಯಕವಾಗಿದ್ದು, ಪ್ರಸ್ತುತ ದೇಶಕ್ಕೆ ರಾಜಕೀಯ ಶಾಸ್ತ್ರ ಬಹು ಮುಖ್ಯ ವಿಷಯವಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಒಂದು ದಿನದ ರಾಜ್ಯಶಾಸ್ತ್ರದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ರಾಜ್ಯಶಾಸ್ತ್ರದ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ರಾಜಕೀಯ ವಿಚಾರದೊಂದಿಗೆ ವರ್ತಮಾನದ ರಾಜಕೀಯ ವ್ಯವಸ್ಥೆಯನ್ನು ತಿಳಿಸುವ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಆಸಕ್ತಿಯನ್ನು ಮೂಡಿಸುವ ಕೆಲಸ ನಡೆಯಬೇಕು. ರಾಜ್ಯಶಾಸ್ತ್ರ ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ, ದೇಶದ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳಲ್ಲಿ ಕಾಲೇಜು ಮಟ್ಟದಲ್ಲಿ ಹೆಚ್ಚು ಹೆಚ್ಚು ರಾಜಕೀಯ ಮತ್ತು ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆಯನ್ನು ನೀಡಬೇಕು ಎಂದು ಹೇಳಿದರು.

ಈ ಸಂದರ್ಭ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರಿಷ್ಕೃತ ನೂತನ ಪ್ರಶ್ನೆ ಪತ್ರಿಕೆ `ರಾಜ್ಯಶಾಸ್ತ್ರ ಮಾರ್ಗದರ್ಶಿ' ಪುಸ್ತಕವನ್ನು ಬಿಡುಗಡೆ ಮಾಡಿದರು.

ಕಾರ್ಯಾಗಾರ ಉದ್ಘಾಟಿಸಿ, ರಾಜ್ಯಶಾಸ್ತ್ರದ ಪರಿಷ್ಕೃತ ಕೈಪಿಡಿಯ ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ಅವರು ನಮ್ಮ ದೇಶದ ಇತಿಹಾಸದ ಪ್ರಮುಖ ಲಕ್ಷಣ ವೈವಿಧ್ಯತೆ ಯಲ್ಲಿ ಏಕತೆ. ಆದರೆ ಅದು ಇದೀಗ ಏಕತೆಯಲ್ಲಿ ವೈವಿಧ್ಯತೆಯ ಕಡೆಗೆ ಸಾಗುತ್ತಿದೆ. ಈಗ ನಮ್ಮ ದೇಶದ ಲಕ್ಷಣವನ್ನೇ ತಿರುಚಲು ಹೊರಟಿದ್ದೇವೆ. ಅದು ನಮ್ಮ ದೇಶದ ದೊಡ್ಡ ದುರಂತವೇ ಸರಿ. ಪ್ರಸ್ತುತ ವೈವಿಧ್ಯತೆಯಲ್ಲಿ ವೈರುಧ್ಯತೆಯನ್ನು ಕಾಣುತ್ತಿ ದ್ದೇವೆ. ಪ್ರತಿಯೊಂದು ದಿಕ್ಕಲ್ಲಿಯೂ ನಾವು ನೀವಲ್ಲ, ನೀವು ನಾವಲ್ಲ ಎಂಬ ಮೇಲು ಕೀಳು ಭಾವನೆಯನ್ನು ಸೃಷ್ಟಿ ಸುವ ಮನೋಭಾವನೆ ನಮ್ಮದು. ಇವತ್ತಿನ ದಿನಗಳಲ್ಲಿ ನಾವು ಮಕ್ಕಳಿಗೆ ಪ್ರೀತಿಯನ್ನು ಹೇಳಿಕೊಡುತ್ತಿಲ್ಲ. ಎಲ್ಲವನ್ನೂ ಮರೆತು ಹೋಗುವ, ಎಲ್ಲವನ್ನೂ ದೂರೀಕರಣ ಮಾಡುವ ಈ ಕಾಲದಲ್ಲಿ ನಾವು ಮತ್ತೊಮ್ಮೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಬೋಧಿಸಬೇಕಿದೆ. ಇಂದಿನ ದಿನಗಳಲ್ಲಿ ಮಾನವಿಕ ವಿಭಾಗಗಳು ವಿದ್ಯಾರ್ಥಿಗಳಲ್ಲಿ ಬದುಕಿನ ಪಾಠ, ಬದುಕುವ ಶೈಲಿಯನ್ನು ಹೆಚ್ಚು ತಿಳಿಸಿಕೊಡುವ ಅಗತ್ಯತೆ ಇದೆ ಎಂದು ಹೇಳಿದರು.

ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರನಾಥ ಎಂ ಕಾರ್ಯ ಗಾರದ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ಫಿಲೋಮಿನಾ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ, ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ಚಿತ್ರಲೇಖ, ಕಾರ್ಯದರ್ಶಿ ಮೀನಾಕ್ಷಿ, ದಿವ್ಯಾ ಕುಮಾರಿ, ಖಜಾಂಜಿ ಸ್ವಪ್ನಾ, ಸೂರಜ್ ಚಾಲ್ಸ್ ನ್ಯೂನ್ಸ್ ಮತ್ತಿತರರು ಉಪಸ್ಥಿತರಿದ್ದರು.

ಪತ್ರಕರ್ತ ಆರ್.ಸಿ.ಭಟ್, ಮೈಸೂರು ಶ್ರೀ ಡಿ ದೇವರಾಜ್ ಅರಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್‍ನ ಸಹ ಪ್ರಾಧ್ಯಾಪಕ ಡಾ. ಆರ್.ಜಿ. ಚಿದಾನಂದ ಮತ್ತು ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್‍ನ ಸಹ ಪ್ರಾಧ್ಯಾಪಕ ಐವನ್ ಲೋಬೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರನಾಥ ಎಂ ಸ್ವಾಗತಿಸಿ ದರು. ಕಾರ್ಯದರ್ಶಿ ದಿವ್ಯಾ ಕುಮಾರಿ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News