ಕೈಯಲ್ಲಿ ಕುರ್‌ಆನ್ ಬರೆದ ಕೆಮ್ಮಾರ ಶಂಸುಲ್ ಉಲಮಾ ಕಾಲೇಜಿನ ವಿದ್ಯಾರ್ಥಿನಿ ಫಾತಿಮತ್ ಅಬೀರಾ
ಉಪ್ಪಿನಂಗಡಿ: ಇಲ್ಲಿನ ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ ಫಾತಿಮತ್ ಅಬೀರಾ ಅಲ್ ಫಾಳಿಲಾ ಪವಿತ್ರ ಕುರ್‌ಆನ್ ಅನ್ನು ಸಂಪೂರ್ಣವಾಗಿ ಕೈಯಲ್ಲಿ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಉಪ್ಪಿನಂಗಡಿಯ ಹಳೆಗೇಟು ಹೈದರ್ ಅಲಿ ನಾಳ ದಂಪತಿಯ ಪುತ್ರಿ ಅಬೀರಾ ಮೂರು ವರ್ಷ ಏಳು ತಿಂಗಳಲ್ಲಿ ಪರಿಶುದ್ಧ ಕುರ್‌ಆನ್ ಅನ್ನು ಸಂಪೂರ್ಣವಾಗಿ ಬರೆದು ಮುಗಿಸಿದ್ದಾರೆ.
2021ರ ಅ.25ರಂದು 9ನೆ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಬರೆಯಲು ಆರಂಭಿಸಿದರೂ ಕೂಡ ಎಸೆಸ್ಸೆಲ್ಸಿ ಬಳಿಕ ಒಂದು ವರ್ಷ ಬರೆದಿರಲಿಲ್ಲ. ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿಗೆ ಫಾಳಿಲಾ ಶರೀಅ ಶಿಕ್ಷಣದ ಜೊತೆಗೆ ಪಿಯುಸಿ ಕಲಿಯಲು ದಾಖಲಾತಿ ಪಡೆದ ಬಳಿಕ ಎರಡು ವರ್ಷದಲ್ಲಿ ಕುರ್‌ಆನ್ ಮೂವತ್ತು ಕಾಂಡವನ್ನು ಕೈಯಲ್ಲಿ ಬರೆದು ಮುಗಿಸಿದರು.
ಈ ಸಂದರ್ಭ ಈಕೆ ಪಿಯುಸಿಯಲ್ಲಿ 553 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದರು. ಸಮಸ್ತ ಫಾಳಿಲಾ ಶರೀಅತ್ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.95.5 ಅಂಕಗಳನ್ನು ಪಡೆದು ಕೇಂದ್ರೀಯ ಬೋರ್ಡ್‌ನ ಟಾಪ್ 10ರಲ್ಲಿ ಸ್ಥಾನವನ್ನು ಪಡಕೊಂಡಿದ್ದಾರೆ.
610 ಪುಟಗಳ ಈ ಕುರ್‌ಆನ್ ಪ್ರತಿಯು 2.260 ಕೆಜಿ ಇದೆ. 13 ಇಂಚು ಉದ್ದ ಮತ್ತು 9 ಇಂಚು ಅಗಲವನ್ನು ಹೊಂದಿದೆ. ಬರೆಯಲು ಕಪ್ಪುಬಣ್ಣದ ಶಾಯಿ ಮತ್ತು ಪಿಂಕ್ ಕಲರ್ ಪೆನ್ನು ಬಳಸಲಾಗಿದೆ.
ಮನೆಯವರ, ಕುಟುಂಬಸ್ಥರ ಮತ್ತು ಕೆಮ್ಮಾರ ಶಂಸುಲ್ ಉಲಮಾ ಕಾಲೇಜಿನ ಶಿಕ್ಷಕ, ಶಿಕ್ಷಕಿಯರ, ಆಡಳಿತ ಸಮಿತಿಯ ಪ್ರೋತ್ಸಾಹವು ನನಗೆ ಈ ಎಲ್ಲಾ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದು ಅಬೀರಾ ಹೇಳಿದ್ದಾರೆ. ಇದೀಗ ಬಿಕಾಂನೊಂದಿಗೆ ಫಳೀಲಾ ಡಿಗ್ರಿ ಪಡೆಯಲು ಮಿತ್ತಬೈಲಿನ ಕಾಲೇಜಿಗೆ ದಾಖಲಾಗಿದ್ದಾರೆ.
*ಕೈಬರಹದ ಕುರ್‌ಆನ್ ಪ್ರತಿ ಬಿಡುಗಡೆ
ಫಾತಿಮತ್ ಅಬೀರಾ ಬರೆದ ಕುರ್‌ಆನ್ ಪ್ರತಿಯನ್ನು ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ, ಆಸಿಫ್ ಹಾಜಿ ದರ್ಬೆ ಜುಬೈಲ್, ಉಮರ್ ಹಾಜಿ ಕೋಡಿಂಬಾಡಿ, ಹಸೈನಾರ್ ಹಾಜಿ ಕೊಯ್ಲ, ರಫೀಕ್ ಹಾಜಿ ಗಂಡಿಬಾಗಿಲು, ಅಬ್ದುರ‌್ರಹ್ಮಾನ್ ಯೂನಿಕ್ ಉಪ್ಪಿನಂಗಡಿ, ಇಸಾಕ್ ಕೆಮ್ಮಾರ, ಖಲಂದರ್ ಗಂಡಿಬಾಗಿಲು, ಕಾಲೇಜಿನ ಪ್ರಾಂಶುಪಾಲ ಅಬ್ದುರ‌್ರಹ್ಮಾನ್ ಫೈಝಿ ಕುಂಬ್ರ, ಫಳೀಲಾ ಕರ್ನಾಟಕ ಕಾಲೇಜುಗಳ ಸಿಎಸ್‌ಡಬ್ಲ್ಯುಸಿ ಇದರ ಅಧ್ಯಕ್ಷ ಅಶ್ರಫ್ ಹಾಜಿ ಉಪ್ಪಿನಂಗಡಿ, ಕಾರ್ಯದರ್ಶಿ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ, ಹಳೆಗೇಟು ಜುಮಾ ಮಸೀದಿಯ ಖತೀಬ್ ಉಸ್ಮಾನ್ ದಾರಿಮಿ, ಅಬ್ದುರ‌್ರಶೀದ್ ದಾರಿಮಿ ಪಾಟ್ರಕೋಡಿ, ವಿದ್ಯಾರ್ಥಿನಿಯ ತಂದೆ ಹೈದರ್ ಹಳೇಗೇಟು ಮತ್ತಿತರರು ಉಪಸ್ಥಿತರಿದ್ದರು.