ಮುನೀರ್ ಕಾಟಿಪಳ್ಳ ಮೇಲೆ ಎಫ್‌ಐಆರ್: ಸಿಪಿಐ ಖಂಡನೆ
ಮಂಗಳೂರು: ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹಾಗೂ ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ಮೇಲೆ ಎಫ್‌ಐಆರ್ ಹಾಕಿರುವುದನ್ನು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಕೆಲವು ದಿನಗಳ ಹಿಂದೆ ಪುತ್ತೂರು ಆಸ್ಪತ್ರೆಯಲ್ಲಿ ಮುಸ್ಲಿಂ ಕುಟುಂಬ ಹಾಗೂ ವೈದ್ಯರ ನಡುವೆ ನಡೆದ ವಾಗ್ವಾದ ಮತ್ತು ಅಲ್ಲಿನ ಐಯಂಎ ಹಾಗೂ ಸಂಘಪರಿವಾರ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈಘಟನೆ ಬಗ್ಗೆ ಮುನೀರ್ ಕಾಟಿಪಳ್ಳ ನೀಡಿದ ಪ್ರತಿಕ್ರಿಯೆ ಹಾಗೂ ಖಂಡನೆಯನ್ನು ವಾರ್ತಾಭಾರತಿ ದಿನಪತ್ರಿಕೆ ಪ್ರಕಟಿಸಿತ್ತು.
ಈ ಬಗ್ಗೆ ಐಯಂಎ ಪುತ್ತೂರು ಘಟಕದ ಕಾರ್ಯದರ್ಶಿ ಠಾಣೆಗೆ ದೂರು ನೀಡಿದಾಗ ಅದರಲ್ಲಿ ಸತ್ಯಾಂಶ ಇಲ್ಲವೆಂಬ ಹಿಂಬರಹದೊಂದಿಗೆ ದೂರನ್ನು ಇತ್ಯರ್ಥಗೊಳಿಸಲಾಗಿತ್ತು. ನಂತರ ವೈದ್ಯರು ನ್ಯಾಯಾಲಯಕ್ಕೆ ಖಾಸಗಿಯಾಗಿ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ಹಾಕಲಾಗಿದೆ. ಇತೀಚೆಗಿನ ದಿನಗಳಲ್ಲಿ ಎಡ ಪಕ್ಷ ಹಾಗೂ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕ್ರಮಗಳ ಮೇಲೆ ಎಫ್‌ಐಆರ್ ದಾಖಲಿಸುವ ಪ್ರವೃತ್ತಿ ಸಾಮಾನ್ಯವಾಗಿಬಿಟ್ಟಿದೆ. ಸರಕಾರ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕೆಂದು ಸಿಪಿಐ ದ.ಕ.ಮತ್ತು ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.