×
Ad

ವಕ್ಫ್ ಉಮೀದ್ ಪೋರ್ಟಲ್‌ನ ದೋಷಗಳನ್ನು ಸರಿಪಡಿಸಿ ಕಾಲಾವಕಾಶ ನೀಡಿ: ಪ್ರಧಾನಿಗೆ ಎಪಿ ಉಸ್ತಾದ್‌ ಪತ್ರ

Update: 2025-12-01 14:54 IST

ಕೋಝಿಕ್ಕೋಡ್: ಕೇಂದ್ರ ವಕ್ಫ್ ಪೋರ್ಟಲ್ ಆದ 'ಉಮೀದ್' ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ನೋಂದಾಯಿಸಲು ನೀಡಲಾದ ಗಡುವು ಡಿ.5 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಮತ್ತು ಮಾಹಿತಿ ಅಪ್‌ಲೋಡ್ ಮಾಡಲು ಹೆಚ್ಚಿನ ಸಮಯಾವವಕಾಶ ನೀಡಬೇಕು ಎಂದು ಒತ್ತಾಯಿಸಿ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.

ಸದ್ಯ ದೇಶಾದ್ಯಂತ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆಯಾದರೂ, ವೆಬ್‌ಸೈಟ್‌ನ ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಸಲ್ಲಿಕೆ (submission) ಪ್ರಕ್ರಿಯೆಯ ಸಂಕೀರ್ಣತೆಗಳು ಕಾರ್ಯವಿಧಾನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಹೊಸದಾಗಿ ಪರಿಚಯಿಸಲಾದ ಪೋರ್ಟಲ್ ಆಗಿರುವುದರಿಂದ ಹಲವಾರು ಕಾರ್ಯಾಚರಣೆಯ ದೋಷಗಳಿವೆ. ಅಲ್ಲದೆ, ಈ ನಿರ್ದಿಷ್ಟ ವೆಬ್‌ಸೈಟ್ ಬಳಕೆಯ ಬಗ್ಗೆ ಡಿಜಿಟಲ್ ಸಾಕ್ಷರತೆಯ ಕೊರತೆಯೂ ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ, ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಮತ್ತು ಪೋರ್ಟಲ್ ಅನ್ನು ನವೀಕರಿಸಬೇಕಿದೆ.  ಆದ್ದರಿಂದ, ಮಾಹಿತಿ ಅಪ್‌ಲೋಡ್ ಮಾಡಲು ಕನಿಷ್ಠ ಒಂದು ವರ್ಷದವರೆಗೆ ಕಾಲಾವಕಾಶವನ್ನು ವಿಸ್ತರಿಸಬೇಕು. ಕಡಿಮೆ ಕಾಲಾವಧಿಯು ಸಾವಿರಾರು ಮುತವಲ್ಲಿಗಳಿಗೆ ಮತ್ತು ವಕ್ಫ್ ಆಸ್ತಿಗಳಿಗೆ ದಂಡ ವಿಧಿಸುವ ಸಾಧ್ಯತೆಗೆ ದಾರಿಮಾಡಿಕೊಡುತ್ತದೆ. ಸರ್ಕಾರಿ ಪ್ಲಾಟ್‌ಫಾರ್ಮ್‌ನ ತಾಂತ್ರಿಕ ದೋಷಗಳಿಗೆ ಬಳಕೆದಾರರನ್ನು ಶಿಕ್ಷಿಸಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಕ್ಫ್ ತಿದ್ದುಪಡಿ ಮತ್ತು ನೋಂದಣಿಗೆ ಸಮಯ ವಿಸ್ತರಣೆ ಕೋರಿ ವಿವಿಧ ಪಕ್ಷಗಳು ಸಲ್ಲಿಸಿದ ಅರ್ಜಿಗಳು ಸುಪ್ರೀಂ ಕೋರ್ಟ್‌ನ ಪರಿಗಣನೆಯಲ್ಲಿರುವಾಗ, ನೋಂದಣಿ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮುಕ್ತಾಯಗೊಳಿಸುವುದು ಆತಂಕಕಾರಿ ಮತ್ತು ಸಂಕೀರ್ಣವಾದ ವಿಷಯವಾಗಿದೆ ಎಂದು ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಮೊಹಲ್ಲಾ ಒಕ್ಕೂಟಗಳು ಅಭಿಪ್ರಾಯಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News