×
Ad

ಜ.23ರಿಂದ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

ಹೂಗಳಲ್ಲಿ ತಯಾರಾಗುತ್ತಿದೆ ‘ವಂದೇ ಭಾರತ್ ರೈಲು’

Update: 2026-01-21 18:46 IST

ಮಂಗಳೂರು, ಜ.21: ದ.ಕ. ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ, ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಜ.23ರಿಂದ 26ರವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿ ಹೂವುಗಳಿಂದ ತಯಾರಿಸಲಾದ ವಂದೇ ಭಾರತ್‌ನ ಪ್ರತಿಕೃತಿ ವಿಶೇಷ ಆಕರ್ಷಣೆಯಾಗಿರಲಿದೆ.

ಪ್ರದರ್ಶನದ ಉದ್ಘಾಟನೆಯನ್ನು ಜ. 23ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ವಿಧಾನಸಭೆ ಸ್ಪೀಕರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜ.24ರಿಂದ 26ರವರೆಗೆ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಭ್ಯ ಎಂದು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ತಿಳಿಸಿದರು.

ಕದ್ರಿ ಉದ್ಯಾನವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರದರ್ಶನದ ಅಂಗವಾಗಿ ಕದ್ರಿ ಉದ್ಯಾನವನದಲ್ಲಿ ಸುಮಾರು 15000 ಸಂಖ್ಯೆಯ 30 ಆತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೋನಿಯಾ, ಟೊರಿನೋ ಇತ್ಯಾದಿ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದೆ. ತರಕಾರಿ ಕೈತೋಟವನ್ನು ರಚಿಸಲಾಗಿದೆ. ಜಿಲ್ಲೆಯ ಪ್ರಾಮುಖ್ಯತೆ ಬಗ್ಗೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಬಗ್ಗೆ ಹಣ್ಣು ಮತ್ತು ತರಕಾರಿಗಳಿಂದ ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ವಿವಿಧ ಅಲಂಕಾರಿಕ ಗಿಡಗಳು, ಬೊನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶನ ಏರ್ಪಡಿಸಲಾಗುವುದು. ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಯೂ ಇರಲಿದೆ ಎಂದು ಅವರು ಹೇಳಿದರು.

ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 20 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಶಾಲಾ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು. ಕಳೆದ ವರ್ಷ ಸುಮಾರು 50000ದಷ್ಟು ಮಂದಿ ಭಾಗವಹಿಸಿದ್ದು, ಈ ವರ್ಷ 60000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಶಶಿಧರ್ ಹೆಚ್., ಕದ್ರಿ ಅಭಿವೃದ್ದಿ ಸಮಿತಿ ಸದಸ್ಯರಾದ ಕೆ. ರಾಮ ಮುಗ್ರೋಡಿ, ಜಿ.ಕೆ. ಭಟ್, ಜಗನ್ನಾಥ್ ಗಾಂಭೀರ್, ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಭಾರತಿ ನಿರ್ಮಲ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ., ಪ್ರದೀಪ್ ಡಿಸೋಜ, ಕೆ. ಪ್ರವೀಣ್, ಸಿರಿ ತೋಟಗಾರಿಕೆ ಸಂಘದ ಸದಸ್ಯ ವೈಕುಂಠ ಹೇರಳೆ, ಹರೀಶ್ಚಂದ್ರ ಅಡ್ಕ ಉಪಸ್ಥಿತರಿದ್ದರು.

‘ಫಲಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿ ಈ ಬಾರಿ ವಿವಿಧ ರೀತಿಯ ಬಣ್ಣದ ಹೂವುಗಳಿಂದ ‘ವಂದೇ ಭಾರತ್ ರೈಲಿನ’ ಕಲಾಕೃತಿ ರಚಿಸಲಾಗುತ್ತಿದೆ. ರೈಲು 3 ಬೋಗಿಗಳನ್ನು ಹೊಂದಲಿದ್ದು, 24 ಅಡಿ ಉದ್ದ ಇರಲಿದೆ. ರೈಲಿನ ಹಳಿ 30 ಫೀಟ್ ಉದ್ದ ಇರಲಿದೆ. ಜತೆಗೆ ಹೂವಿನ ಮಿಕ್ಕಿ ಮೌಸ್, ಸೆಲ್ಫಿ ಪಾಯಿಂಟ್ ಇರಲಿದೆ. ತೋಟಗಾರಿಕಾ ಇಲಾಖೆಯಿಂದ 1ರೂ.ಗಳ ತರಕಾರಿ ಗಿಡಗಳ ಮಾರಾಟವೂ ನಡೆಯಲಿದೆ.’

-ವಿನಾಯಕ ನರ್ವಾಡೆ, ಸಿಇಒ, ಜಿ.ಪಂ.,ದ.ಕ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News