×
Ad

ಸಿಐಟಿಯು ನೇತೃತ್ವದಲ್ಲಿ ನಾಲ್ಕು ದಿನಗಳ ಬೆಳ್ತಂಗಡಿ–ಮಂಗಳೂರು ಕಾಲ್ನಡಿಗೆ ಜಾಥಾ

ಕಾರ್ಮಿಕ–ರೈತ ವಿರೋಧಿ ಕಾನೂನುಗಳಿಂದ ಉದ್ಯೋಗ ಖಾತ್ರಿ ಯೋಜನೆ ಹತ್ಯೆ: ಕೆ. ಯಾದವ ಶೆಟ್ಟಿ

Update: 2026-01-26 13:28 IST

ಬೆಳ್ತಂಗಡಿ: ನಾಲ್ಕು ಕಾರ್ಮಿಕ ವಿರೋಧಿ ವೇತನ ಸಂಹಿತೆಗಳು, ರೈತ ವಿರೋಧಿ ಬೀಜ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ಸೇರಿದಂತೆ ಜನರ ಬದುಕಿಗೆ ಅಪಾಯಕಾರಿಯಾದ ಕಾನೂನುಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಕತ್ತು ಹಿಸುಕಿ ಕೊಂದಿದೆ ಎಂದು ರೈತ–ಕಾರ್ಮಿಕ ರಾಜ್ಯ ಮುಖಂಡ ಕೆ. ಯಾದವ ಶೆಟ್ಟಿ ಆರೋಪಿಸಿದರು.

ಅವರು ಇಂದು ಬೆಳ್ತಂಗಡಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಆರಂಭವಾದ ಬೆಳ್ತಂಗಡಿ–ಮಂಗಳೂರು ನಾಲ್ಕು ದಿನಗಳ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ರೈತ–ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲವಾಗಿ ಈ ಜಾಥಾ ನಡೆಸಲಾಗುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ, ರೈತ ವಿರೋಧಿ ಮಾತ್ರವಲ್ಲ, ಭಾರತೀಯ ಪ್ರಜೆಗಳ ವಿರೋಧಿ ಸರ್ಕಾರವಾಗಿದೆ ಎಂದು ಕಟುವಾಗಿ ಟೀಕಿಸಿದರು.

ಕಾರ್ಮಿಕರಿಗೆ ಇರುವ ಸಂಘಟನೆ ಕಟ್ಟುವ ಹಕ್ಕು, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು, ನ್ಯಾಯಸಮ್ಮತ ವೇತನ, ಸಮಾನ ವೇತನ, ಕೆಲಸದ ಹಕ್ಕು, ಶಿಕ್ಷಣದ ಹಕ್ಕು ಸೇರಿದಂತೆ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದರು. ಕಾರ್ಮಿಕರು ತ್ಯಾಗ–ಬಲಿದಾನಗಳ ಮೂಲಕ ಗಳಿಸಿದ ಕಾನೂನುಗಳನ್ನು ರದ್ದುಪಡಿಸಿ, ಮಾಲೀಕರ ಪರವಾದ ಸಂಹಿತೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿದೆ.

ಈ ಸಂಹಿತೆಗಳು ಹಿಂಪಡೆಯುವವರೆಗೆ ಹಾಗೂ ರದ್ದುಪಡಿಸಲಾದ 29 ಕಾರ್ಮಿಕ ಕಾನೂನುಗಳನ್ನು ಮರುಸ್ಥಾಪಿಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಘೋಷಿಸಿದರು. ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕಿ ಸ್ವಾತಂತ್ರ್ಯ ಚಳವಳಿಗೆ ದ್ರೋಹ ಎಸಗಿದರೆ, ಇಂದು ನರೇಂದ್ರ ಮೋದಿ ಅದಾನಿ–ಅಂಬಾನಿಗಳ ಕಾಲಿಗೆ ಬಿದ್ದು ಕಾರ್ಮಿಕ ವರ್ಗಕ್ಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಲ್ಲಿ ಜಾಥಾ ತಂಡದ ನಾಯಕಿ ಈಶ್ವರಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಜಯಶ್ರೀ ವಂದಿಸಿದರು.

ಶ್ಯಾಮರಾಜ್, ಲೋಲಾಕ್ಷಿ ಬಂಟ್ವಾಳ, ಪುಷ್ಪ, ಧನಂಜಯ, ಅಭಿಷೇಕ್, ಅಧಿತಿ, ಫಾರೂಕ್, ಸುಕುಮಾರ್, ಅಶ್ವಿತ, ಲತಾ ಪುತ್ತೂರು, ಕುಮಾರಿ, ಅಜಿ.ಎಂ. ಜೋಸ್, ಸಲಿಮೋನ್, ಪ್ರದೀಪ್ ಕಳೆಂಜ, ನಜೀರ್ ಮೊದಲಾದವರು ಉಪಸ್ಥಿತರಿದ್ದರು.

ನಂತರ ಜಾಥಾ ಮಂಗಳೂರು ಕಡೆಗೆ ಹೊರಟಿತು. ಇಂದು ಮೂರ್ಜೆ ತಲುಪಲಿರುವ ಜಾಥಾ, 27-01-2026 ರಂದು ಮೂರ್ಜೆಯಿಂದ ಹೊರಟು, ಮರುದಿನ ಬಿಸಿರೋಡಿಗೆ, ನಂತರ ಪಡೀಲುವನ್ನು ತಲುಪಿ 29-01-2026 ರಂದು ಮಂಗಳೂರು ತಲುಪಲಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News