ಚತುಷ್ಪಥ ಕಾಮಗಾರಿ: ಬಜತ್ತೂರಿನಲ್ಲಿ ತಲೆಯೆತ್ತಲು ಸಿದ್ಧವಾಗಿದೆ ಟೋಲ್ ಪ್ಲಾಝಾ
ನಿರ್ಮಾಣ ಹಂತದಲ್ಲಿರುವ ಟೋಲ್ ಪ್ಲಾಝಾ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ..ರೋಡ್-ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸನಿಹದಲ್ಲಿ ಟೋಲ್ ಪ್ಲಾಝಾ ನಿರ್ಮಾಣ ಆಗುತ್ತಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, ಚತುಷ್ಪಥ ರಸ್ತೆ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್‍ಗೇಟ್ ಆರಂಭವಾಗುವ ಸಾಧ್ಯತೆಗಳು ವ್ಯಕ್ತವಾಗಿದೆ.
ಬಿ.ಸಿ. ರೋಡ್‍ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ಕಾಮಗಾರಿ ಶೇಕಡಾ 75ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್‍ಗೇಟ್ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ವಿಶಾಲವಾದ ಜಾಗವನ್ನು ಹೊಂದಿದ್ದು, ಇಲ್ಲಿ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು ಟೋಲ್ ಪ್ಲಾಝಾ ಅನುಷ್ಠಾನದ ಕಾರ್ಯ ನಡೆಯುತ್ತಿದೆ. ಶೆಲ್ಟರ್ ಹಾಗೂ ಹೆದ್ದಾರಿಯ ಪಕ್ಕದಲ್ಲೇ ಕಾಂಪ್ಲೆಕ್ಸ್ ಕೂಡ ನಿರ್ಮಾಣಗೊಂಡಿದೆ. ಕಾಮಗಾರಿ ಭರದಿಂದ ನಡೆಯುತ್ತಿದ್ದು ಇನ್ನು ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.
ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್‍ಆರ್ ಕನ್‍ಸ್ಟ್ರಕ್ಷನ್ ಸಂಸ್ಥೆ ಟೋಲ್ ಪ್ಲಾಝಾ ನಿರ್ಮಾಣದ ಕಾರ್ಯವನ್ನು ನಿರ್ವಹಿಸುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್‍ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್‍ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್‍ಗಳಿರಲಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದೆ.
ಏಪ್ರಿಲ್‍ನಿಂದ ಟೋಲ್ ಸಂಗ್ರಹ ಸಾಧ್ಯತೆ:
ಚತುಷ್ಪಥ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು ಮಾರ್ಚ್, ಏಪ್ರಿಲ್ ವೇಳೆಗೆ ಬಜತ್ತೂರು ಟೋಲ್‍ಗೇಟ್ ಓಪನ್ ಆಗಿ ಟೋಲ್ ಸಂಗ್ರಹವೂ ಆರಂಭವಾಗುವ ಸಾಧ್ಯತೆ ಇದೆ. ಟೋಲ್ ಆರಂಭಗೊಳ್ಳಬೇಕಾದರೆ ಅದಕ್ಕೆ ಪ್ರತ್ಯೇಕ ನೋಟಿಫಿಕೇಶನ್ ಆಗಬೇಕಿದೆ. ಆ ಬಳಿಕವೇ ಟೋಲ್ ಸಂಗ್ರಹದ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ. ಸ್ಥಳೀಯರಿಗೆ ಯಾವ ರೀತಿಯ ಶುಲ್ಕ, ವಿನಾಯಿತಿ ಹೇಗೆ, ಉಳಿದ ವಾಹನಗಳಿಗೆ ಹೇಗೆ ಶುಲ್ಕ ಇರುತ್ತದೆ ಎಂಬುದು ನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ನಡೆಯಲಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ಪಂಪ್‍ವೆಲ್- ಗುಂಡ್ಯ ಮಧ್ಯೆ 7ನೇ ಟೋಲ್ ಫ್ಲಾಝಾ
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಬೆಂಗಳೂರು ನೆಲಮಂಗಲದಿಂದ ಸಕಲೇಶಪುರ ಮಧ್ಯೆ 5 ಕಡೆ ಟೋಲ್ ಫ್ಲಾಝಾ ಇದೆ. ದ.ಕ. ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್‍ವೆಲ್ ಮಧ್ಯೆ ಬಿ.ಸಿ. ರೋಡು ಸಮೀಪ ಬ್ರಹ್ಮರಕೂಟ್ಲುನಲ್ಲಿ ಟೋಲ್ ಫ್ಲಾಝಾ ಇದ್ದು, ವಳಾಲುನಲ್ಲಿ ನಿರ್ಮಾಣವಾಗುತ್ತಿರುವ ಟೋಲ್ ಫ್ಲಾಝಾ 2ನೇಯದ್ದಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ 7 ಟೋಲ್ ಫ್ಲಾಝಾಗಳಲ್ಲಿ ಶುಲ್ಕ ತೆರಬೇಕಾಗುತ್ತದೆ.
ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣ;
ʼಟೋಲ್ ಫ್ಲಾಝಾ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಬಹುತೇಕ ಕಾಮಗಾರಿಗಳು ಮುಗಿದಿವೆ. ಇನ್ನು ಒಂದೆರಡು ತಿಂಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‍ಆರ್ ಕನ್‍ಸ್ಟ್ರಕ್ಷನ್ ಕಂಪೆನಿಯೇ ಟೋಲ್ ಪ್ಲಾಝಾ ನಿರ್ಮಾಣದ ಕಾಮಗಾರಿ ಮಾಡುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರ ಆಗಲಿದೆ. ಆ ಬಳಿಕವೇ ಟೋಲ್ ಸಂಗ್ರಹದ ಬಗ್ಗೆ ಇಲಾಖೆ ನಿರ್ಧರಿಸಲಿದೆ".
-ಅನಿಲ್‍ಕುಮಾರ್ ಸಿಂಗ್, ಕಾಮಗಾರಿ ಮೇಲ್ವಿಚಾರಕರು
"ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಒಂದು ಟೋಲ್ ಪ್ಲಾಝಾದಿಂದ ಇನ್ನೊಂದು ಟೋಲ್ ಪ್ಲಾಝಾಕ್ಕೆ 60 ಕಿ.ಮೀ.ನ ಅಂತರ ಬೇಕು. ಆದರೆ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಿಂದ ಬಜತ್ತೂರು ಟೋಲ್ ಪ್ಲಾಝಾಕ್ಕೆ ಇರುವ ಅಂತರ ಕೇವಲ 38.06 ಕಿ.ಮೀ. ಆದ್ದರಿಂದ ಈ ಟೋಲ್ ಪ್ಲಾಝಾ ನಿರ್ಮಾಣವು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ದಿನವೊಂದಕ್ಕೆ ಸುಮಾರು 400ರಷ್ಟು ಖಾಸಗಿ ಬಸ್‍ಗಳು ಪ್ರಯಾಣಿಸುತ್ತಿವೆ. ಇಲ್ಲಿ ಟೋಲ್ ಫ್ಲಾಝಾ ನಿರ್ಮಾದಿಂದ ಇಲ್ಲಿ ಕಟ್ಟಬೇಕಾದ ಶುಲ್ಕದ ಹೊರೆ ಪ್ರಯಾಣಿಕರ ಪಾಲಿಗೆ ಬೀಳುತ್ತದೆ. ಇದಲ್ಲದೆ, ಬೆಂಗಳೂರು, ಹಾಸನ, ಸಕಲೇಶಪುರ ಭಾಗದಿಂದಲೇ ಈ ಭಾಗಕ್ಕೆ ತರಕಾರಿ, ಆಹಾರ ಸಾಮಗ್ರಿಗಳು ಬರುವುದು. ಅವುಗಳಿಗೂ ಬೆಲೆಯೇರಿಕೆ ಆಗಲಿದೆ. ಉದನೆ, ನೆಲ್ಯಾಡಿ, ಶಿರಾಡಿ, ಗುಂಡ್ಯ ಭಾಗದಲ್ಲಿ ಕೃಷಿಕರು ಹೆಚ್ಚಿದ್ದು, ಅವರೆಲ್ಲಾ ಅವಲಂಬನೆ ಮಾಡಿರೋದು ಉಪ್ಪಿನಂಗಡಿಯನ್ನೇ. ಈ ಟೋಲ್‍ನಿಂದಾಗಿ ಅವರಿಗೂ ತೊಂದರೆಯಾಗಲಿದೆ. ಪ್ರವಾಸಿಗರಿಗೂ ಹೊರೆಯಾಗಲಿದೆ. ಬ್ರಹ್ಮರಕೂಟ್ಲು ಟೋಲ್‍ಗೆ .36 ವರ್ಷದ ರಿಯಾಯಿತಿ ಅವಧಿಯಿದ್ದು, ಅಲ್ಲಿ ಇನ್ನು 24ವರ್ಷ ಟೋಲ್ ಶುಲ್ಕವನ್ನು ಸಂಗ್ರಹಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ. ಆದ್ದರಿಂದ ಇಲ್ಲಿ ಟೋಲ್ ಪ್ಲಾಝಾ ನಿರ್ಮಾಣದಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ".
- ಶಬೀರ್ ಅಹಮ್ಮದ್ ನೆಕ್ಕಿಲಾಡಿ, ಸಾಮಾಜಿಕ ಕಾರ್ಯಕರ್ತರು