×
Ad

ನಕಲಿ ದಾಖಲೆ ಸೃಷ್ಟಿಸಿ ವಂಚನೆ ಪ್ರಕರಣ: ಮತ್ತೆ ನಾಲ್ಕು ಮಂದಿ ಆರೋಪಿಗಳ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ

Update: 2025-09-12 22:02 IST

ಮಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿರುವ ಸಿಸಿಬಿ ಪೊಲೀಸರು ಮತ್ತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ತೊಕ್ಕೊಟ್ಟು ಅಂಬಿಕಾ ರಸ್ತೆ ನಿವಾಸಿ ನಿಶಾಂತ್ ಕುಮಾರ್ (28), ಬಂಟ್ವಾಳ ತಾಲೂಕು ಪುದು ಸುಜೀರ್ ರಸ್ತೆ ನಿವಾಸಿ ನಿತಿನ್ ಕುಮಾರ್ (31), ಇಂದಿರಾನಗರ ಹಾಲಾಡಿ ಸಜಿಪ ಮುನ್ನೂರು ನಿವಾಸಿ ಹಸನ್ ರಿಯಾಝ್ (46), ಕಾವೂರು ಪಳನೀರ್ ನಿವಾಸಿ ಹನೀಫ್ (39) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿ ಸೃಷ್ಟಿಸಿ ಅವುಗಳನ್ನು ನೈಜ ದಾಖಲಾತಿಗಳು ಎಂದು ನಂಬಿಸಿ ವಿವಿಧ ಇಲಾಖೆಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡಿ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡಲು ಬಳಕೆ ಮಾಡುತ್ತಿದ್ದ ಆರೋಪದ ಮೇರೆಗೆ ಬಪ್ಪನಾಡುವಿನ ಅಬ್ದುಲ್ ರೆಹಮಾನ್ (46) ಎಂಬಾತನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆತ ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮತ್ತೆ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಂಚನೆ ಜಾಲದಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News