×
Ad

ಮೂಡುಬಿದಿರೆ| ವಿದೇಶದಲ್ಲಿ ಉದ್ಯೋಗದ ಆಮಿಷ ನೀಡಿ ವಂಚನೆ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

ಏನಿದು ವಂಚನೆ ಪ್ರಕರಣ?

Update: 2025-11-13 20:13 IST

ಸಾಂದರ್ಭಿಕ ಚಿತ್ರ

ಮೂಡುಬಿದಿರೆ: ವಿದೇಶದಲ್ಲಿ ವೈದ್ಯಕೀಯ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಮೂಡುಬಿದಿರೆ ಸೇರಿದಂತೆ ಜಿಲ್ಲೆಯ ಹಲವು ಭಾಗದ ಜನರಿಗೆ ಸುಮಾರು 1 ಕೋಟಿ ರೂ. ಗೂ ಅಧಿಕ ಹಣವನ್ನು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳ ಪೈಕಿ, ಪ್ರಮುಖ ಆರೋಪಿಗೆ ಮೂಡುಬಿದಿರೆ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು ಮೂಲದ ಪ್ರಕೃತಿ ಯು. (34) ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ‌.

ಈಕೆಯೊಂದಿಗೆ ವಂಚನೆಯಲ್ಲಿ ಭಾಗಿಯಾಗಿದ್ದ ಕುಂದಾಪುರದ ಗಂಗೊಳ್ಳಿ ಚರ್ಚ್ ರೋಡ್‌ನ ನಿವಾಸಿಯಾದ ಆಲ್ಟನ್ ರೆಬೆಲ್ಲೋ (42) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಏನಿದು ವಂಚನೆ ಪ್ರಕರಣ?

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಿಗೆ ವಿದೇಶದಲ್ಲಿ ಆಕರ್ಷಕ ಉದ್ಯೋಗ ಮತ್ತು ಕೆಲಸದ ವೀಸಾಗಳನ್ನು ವ್ಯವಸ್ಥೆ ಮಾಡಿಕೊಡುವುದಾಗಿ ಆರೋಪಿಗಳು ನಂಬಿಸಿದ್ದರು. ಇದನ್ನು ನಂಬಿ ಅನೇಕರು ದೊಡ್ಡ ಮೊತ್ತದ ಹಣವನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದರು. ಆದರೆ ಉದ್ಯೋಗಗಳು ದೊರೆಯದಿದ್ದಾಗ, ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು.

ಕಿನ್ನಿಗೋಳಿಯ ನಿವಾಸಿಯೊಬ್ಬರು ನೀಡಿದ ದೂರಿನನ್ವಯ, ಅವರ ಮಗನಿಗೆ 'ನೆದರ್ ಲ್ಯಾಂಡ್'ನಲ್ಲಿ ವೈದ್ಯಕೀಯ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಲಾಗಿದೆ. ವೀಸಾ ಸಿಗದ ಕಾರಣ ಹಣ ಹಿಂದಿರುಗಿಸುವಂತೆ ಕೆವಿನ್ ಪಿಂಟೋ ಕೇಳಿದಾಗ, ಆರೋಪಿ ಪ್ರಕೃತಿ ಒಂದು ವಾರದಲ್ಲಿ ಹಣ ನೀಡುವುದಾಗಿ ಭರವಸೆ ನೀಡಿ ವಂಚಿಸಿದ್ದಳು ಎನ್ನಲಾಗಿದೆ.

ನಂತರ ಮಾಹಿತಿ ಕಲೆ ಹಾಕಿದಾಗ, ಪ್ರಕೃತಿ ಮತ್ತು ಆಕೆಯ ಸಹವರ್ತಿಯೊಬ್ಬಳು ಕಿನ್ನಿಗೋಳಿಯ ಯುವಕನಿಗೆ ಮಾತ್ರವಲ್ಲದೆ ಮೂಡುಬಿದಿರೆ ಸಹಿತ ಜಿಲ್ಲೆಯ ಹಲವರಿಗೆ ಇದೇ ರೀತಿ ವಂಚಿಸಿರುವುದು ತಿಳಿದು ಬಂದಿದೆ. ಮೂಡುಬಿದಿರೆಯಲ್ಲಿ ವಂಚನೆಗೆ ಒಳಗಾದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕೃತಿ ಪರವಾಗಿ ಮೂಡುಬಿದಿರೆಯ ಯುವ ವಕೀಲೆ ರೂಪಾ ಬಲ್ಲಾಳ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News