ಮೋಸದಿಂದ ಹಣ ವಂಚನೆ: ಪ್ರಕರಣ ದಾಖಲು
Update: 2025-09-07 22:10 IST
ಮಂಗಳೂರು, ಸೆ.7: ಟ್ರೇಡಿಂಗ್ ಜಾಹೀರಾತು ನೋಡಿದ ವ್ಯಕ್ತಿಯೊಬ್ಬರು 23,96,980 ರೂ. ಹೂಡಿಕೆ ಮಾಡಿ ವಂಚನೆಗೊಳಗಾದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ದುಬೈಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಬಳಿಕ ಅಂದರೆ 2024ರ ಫೆ.27ರಂದು ಟ್ರೇಡಿಂಗ್ ಜಾಹೀರಾತು ನೋಡಿದ ತಾನು ಹಣವನ್ನು ಹೂಡಿಕೆ ಮಾಡಲು ಆಸಕ್ತಿಯಿಂದ ಅಲಿಂಕ್ ಮೇಲೆ ಕ್ಲಿಕ್ ಮಾಡಿದ್ದೆ. ಬಳಿಕ ವೆಬ್‌ಸೈಟ್‌ನಲ್ಲಿ ಟ್ರೇಡಿಂಗ್ ಖಾತೆ ತೆರೆಯಲು ರಿಜಿಸ್ಟ್ರೆಷನ್ ಮಾಡಿದೆ. ಆ ನಂತರ ಅಪರಿಚಿತರು ತನಗೆ ಜೂಮ್ ಆ್ಯಪ್‌ನಲ್ಲಿ ಕರೆ ಮಾಡಿ ರಿಜಿಸ್ಟ್ರೆಷನ್ ಮೊತ್ತವನ್ನು ಹಾಕಲು ತಿಳಿಸಿದರು. ಹಾಗೇ 82,862.90 ರೂ.ವನ್ನು ವರ್ಗಾವಣೆ ಮಾಡಿದ್ದೆ. ನಂತರ ಅಪರಿಚಿತರು ಹೇಳಿದಂತೆ ಹಂತಹಂತವಾಗಿ 23,96,980 ರೂ. ಪಾವತಿಸಿದ್ದೆ. ಬಳಿಕ ಆರೋಪಿಗಳು ತನಗೆ ವಂಚನೆ ಮಾಡಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.