×
Ad

ಬಕ್ರೀದ್ ಹಬ್ಬದ ಪ್ರಯುಕ್ತ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ನೇಹ ಕೂಟ

Update: 2025-06-17 13:34 IST

ಉಳ್ಳಾಲ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಘರ್ಷಣೆಗಳಿಂದಾಗಿ ಹಬ್ಬಗಳು ಆಯಾಯ ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವುದು ಖೇದಕರ. ನಾವೆಲ್ಲರೂ ಜೊತೆಗೂಡಿ ಮತ್ತೆ ಜಿಲ್ಲೆಯಲ್ಲಿ ಸೌಹಾರ್ದತೆಯ ವಾತಾವರಣ ಸೃಷ್ಟಿಸಿ ಹಬ್ಬಗಳನ್ನು ಎಲ್ಲಾ ಧರ್ಮೀಯರು ಜೊತೆಯಾಗಿ ಸೇರಿ ಆಚರಿಸಿ ಸಂಭ್ರಮಿಸುವಂತಾಗಲು ಮಾಧ್ಯಮಗಳ ಸಹಕಾರವು ಅಗತ್ಯವೆಂದು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ನ ಟ್ರಸ್ಟಿ ಯು.ಹೆಚ್.ಫಾರೂಕ್ ಹೇಳಿದರು.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸ್ನೇಹ ಕೂಟ ಮತ್ತು ವಿಚಾರ ವಿನಿಮಯವನ್ನುದ್ದೇಶಿಸಿ ಅವರು ಮಾತನಾಡಿದರು.

ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ ಎನ್.ಕೊಣಾಜೆ ಮಾತನಾಡಿ ತಾಲೂಕಿನಲ್ಲಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉಳ್ಳಾಲ ಸೆಂಟ್ರಲ್ ಕಮಿಟಿಯ ಕಾರ್ಯ ಶ್ಲಾಘನೀಯ.

ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ, ಮಾದಕ ವ್ಯಸನಗಳ ವಿರುದ್ಧ ಜನ ಜಾಗೃತಿ ಮೂಡಿಸಬೇಕಿದೆ. ಇತ್ತೀಚಿನ‌ ದಿನಗಳಲ್ಲಿ ಸುರಿಯುತ್ತಿರುವ ಮಳೆಗೆ ಕೃತಕ ನೆರೆಯ ಹಾವಳಿ ಹೆಚ್ಚಾಗಿದ್ದು,ಇದಕ್ಕೆ ಮಾನವ ಎಸಗಿದ ಪ್ರಮಾದಗಳೇ ಕಾರಣವಾಗಿದ್ದು ಆ ನಿಟ್ಟಿನಲ್ಲಿ ಜನರಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನ ಮೂಡಿಸುವ ಕಾರ್ಯಕ್ರಮಗಳನ್ನ ಸಂಘಟನೆಯು ಹಮ್ಮಿಕೊಳ್ಳಬೇಕಿದೆ ಎಂದರು.

ಉಳ್ಳಾಲದಲ್ಲಿ ಇನ್ನೂ ಬಗೆಹರಿಯದ ಯುಜಿಡಿ ಸಮಸ್ಯೆ, ಉಳ್ಳಾಲ ಪ್ರದೇಶದಲ್ಲಿ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಮಾದಕ ವಸ್ತುಗಳ ಬಗ್ಗೆ ಜನಜಾಗೃತಿ, ಕೋಮು ಸಂಘರ್ಷಕ್ಕೆ ಸಾಮಾಜಿಕ ಜಾಲತಾಣಗಳ ಪಾತ್ರ ಹಾಗೂ ಇತ್ತೀಚಿನ ದಿನಗಳಲ್ಲಿ ಉಳ್ಳಾಲದಲ್ಲಿ ಶಾಂತಿ ಸಭೆಗಳು ಏಕೆ ನಡೆಯುತ್ತಿಲ್ಲ? ಎಂಬ ವಿಷಯಗಳ ಬಗ್ಗೆ ಉಳ್ಳಾಲ‌ ಪತ್ರಕರ್ತರು-ಉಳ್ಳಾಲ ಸೆಂಟ್ರಲ್ ಕಮಿಟಿ ನಡುವೆ ಸಂವಾದ ಹಾಗೂ ವಿಚಾರ ವಿನಿಮಯ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆಯವರನ್ನು ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ನ ಅಧ್ಯಕ್ಷ ನವಾಝ್ ಉಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ತ್ವಾಹ, ಜೊತೆ ಕಾರ್ಯದರ್ಶಿ ಮುಹಮ್ಮದ್ ಸಲ್ಮಾನ್, ಸದಸ್ಯರಾದ ಇಬ್ರಾಹಿಂ ಆಲಿಯಬ್ಬ, ಅಬ್ದುಲ್ ರಹಿಮಾನ್, ಮುಸ್ತಫಾ ಉಳ್ಳಾಲ್, ಬಿ.ಎ ಅಬ್ದುಲ್ ಜಬ್ಬಾರ್, ಯು.ಜಿ.ಸಿದ್ದೀಕ್ ,ಇಬ್ರಾಹಿಂ ಮಾರ್ಗತಲೆ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಯು.ಕೆ. ಮುಹಮ್ಮದ್ ಮುಸ್ತಫ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಧ್ಯಮ ವಕ್ತಾರ ಇರ್ಶಾದ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News