ಸರಕಾರದ ಬೊಕ್ಕಸದಿಂದ ಪಿಂಚಣಿ ಕೊಡಿ: ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು, ಆ.7: ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ರಾಜ್ಯ ಸರಕಾರ ಹಗಲು ದರೋಡೆಗಿಳಿದಿದೆ. ಸರಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಈ ನಿರ್ಧಾರ ನಮ್ಮದಲ್ಲ, ಹಿಂದಿನ ಸರಕಾರದ್ದು ಎಂದು ಬಾಲಿಶ ಹೇಳಿಕೆ ನೀಡುತ್ತಿದೆ. ಗ್ರಾಹಕರಿಂದ ವಸೂಲಿ ಮಾಡಿ ಪಿಂಚಣಿ ಕೊಡುವ ಬದಲು ಸರಕಾರ ತನ್ನ ಬೊಕ್ಕಸದಿಂದ ಪಿಂಚಣಿ ಕೊಡಲಿ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ತನ್ನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅವಧಿಯ ಕರೆಂಟ್ ಬಿಲ್ಲುಗಳಲ್ಲಿ ಪಿಂಚಣಿ ಹಾಗೂ ಗ್ರ್ಯಾಚುಟಿ ಹೆಸರಿನಲ್ಲಿ ಒಂದೇ ಒಂದು ರೂಪಾಯಿ ಕೂಡ ಸಂಗ್ರಹ ಮಾಡಿಲ್ಲ. ಆದರೆ ಹಾಲಿ ಕಾಂಗ್ರೆಸ್ ಸರಕಾರ ಜನರನ್ನು ಲೂಟಿ ಮಾಡುತ್ತಿದೆ. ಸಂಶಯವಿದ್ದರೆ ಕಾಂಗ್ರೆಸ್ಸಿಗರ ಸಹಿತ ಪ್ರತಿಯೊಬ್ಬರೂ ತಮ್ಮ ಮನೆಯ ಕರೆಂಟ್ ಬಿಲ್ಲುಗಳನ್ನು ಪರೀಕ್ಷಿಸಿಕೊಳ್ಳಬಹುದು ಎಂದರು.
ಕೆಂಪುಕಲ್ಲು ಮತ್ತು ಮರಳು ಅಭಾವವು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ದ.ಕ. ಜಿಲ್ಲಾ ಬಿಜೆಪಿ ನಿಯೋಗವು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಆದರೂ ಈ ಗೊಂದಲವನ್ನು ಬಗೆಹರಿಸದೆ ಜಿಲ್ಲೆಯ ಜನತೆಯನ್ನು ಸಂಪೂರ್ಣ ಕಡೆಗಣಿಸಿರುವುದು ಖಂಡನೀಯ ಎಂದು ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸಂಜಯ್ ಪ್ರಭು, ಮುರುಳಿ ಹೊಸಮಜಲು, ಗಂಗಾಧರ್ ಸಾಲ್ಯಾನ್ ಉಪಸ್ಥಿತರಿದ್ದರು.