×
Ad

ಮಂಗಳೂರು ವಿವಿಯಲ್ಲಿ ಅಂತರ್ಜಲ ನಿರ್ವಹಣೆ ಕಾರ್ಯಾಗಾರ ಉದ್ಘಾಟನೆ

Update: 2025-11-21 18:57 IST

ಕೊಣಾಜೆ: ಆಧುನಿಕತೆ ಮತ್ತು ನಮ್ಮ ಜನಜೀವನಶೈಲಿ ಎಷ್ಟೇ ಮುಂದುವರಿದರೂ ನೀರಿಲ್ಲದೆ ಬದುಕಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಂದು ಅರಣ್ಯನಾಶ, ಪರಿಸರ ಮಾಲಿನ್ಯ ಹಾಗೂ ಇನ್ನಿತರ ಕಾರಣಗಳ ಪರಿಣಾಮವಾಗಿ ಭೂಕುಸಿತ, ನೆರೆ ಮೊದಲಾದ ಸಮಸ್ಯೆಗಳು ಹೆಚ್ಚುತ್ತಿದ್ದರೆ,‌ ಮತ್ತೊಂದೆಡೆ ಅಂತರ್ಜಲ ಮಟ್ಟವೂ ಕುಸಿಯುತ್ತಿರುವುದು ಆಘಾತಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಂತರ್ಜಲ ಜಲಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕಿದೆ ಎಂದು ಮಂಗಳೂರು ವಿವಿ ವಿಜ್ಞಾನ ವಿಕಾಯದ ಡೀನ್ ಪ್ರೊ.ಮಂಜಯ್ಯ ಅವರು ಹೇಳಿದರು.

ಕೇಂದ್ರೀಯ ಅಂತರ್ಜಲ‌ ಮಂಡಳಿ, ನೈರುತ್ಯ ಕ್ಷೇತ್ರ ಬೆಂಗಳೂರು ಇದರ ವತಿಯಿಂದ ಮಂಗಳೂರು ವಿವಿ ಸಾಗರಭೂ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ವಿವಿಯ ಸೆಮಿನಾರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಲಚರ‌ ಮ್ಯಾಪಿಂಗ್, ಅಂತರ್ಜಲ ಸಂಬಂಧಿತ ಸಮಸ್ಯೆಗಳು ಹಾಗೂ ಅಂತರ್ಜಲ ನಿರ್ವಹಣೆ ಎಂಬ ವಿಷಯದಲ್ಲಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅಂತರ್ಜಲದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಬಹಳ ಮುಖ್ಯವಾಗುತ್ತದೆ ಎಂದರು.

ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪಾಲಾಕ್ಷಪ್ಪ ಅವರು ಮಾತನಾಡಿ, 1970 ರ ನಂತರ ಕೊಳವೆ ಬಾವಿಗಳು ಬಂದು ಕೆರೆ,‌ ತೆರದ ಬಾವಿಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಅಂತರ್ಜಲ‌ಮಟ್ಟವೂ ಕುಸಿಯುವಂತಾಗಿದೆ. ಜಲಮೂಲಗಳ ಸಂರಕ್ಷಣೆಗಳಾಗಬೇಕು ಮತ್ತು ಹೆಚ್ಚೆಚ್ಚು ಸಂಶೋಧನೆಗಳಾಗಬೇಕು ಎಂದರು.

ಫರಿದಾಬಾದ್ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ ನ ನಿವೃತ್ತ ಸದಸ್ಯ ಡಾ.ಕೆ.ನಜೀಬ್, ಸಾಗರ ಭೂ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ.ಪ್ರಿಯಾ ಅವರು ಮಾತನಾಡಿದರು.

ಬೆಂಗಳೂರಿನ ಕೇಂದ್ರೀಯ ಅಂತರ್ಜಲ‌ ಮಂಡಳಿಯ ನಿರ್ದೇಶಕರಾದ ಜಿ.ಕೃಷ್ಣ ಮೂರ್ತಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂತರ್ಜಲ ಮಟ್ಟ ಕುಸಿತ,‌ ನೀರಿನ ಮೂಲ ಬರಿದಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ಅಂತರ್ಜಲ‌ ಮಂಡಳಿಯ ವತಿಯಿಂದ ಅನೇಕ ಯೋಜನೆಯನ್ನು ರೂಪಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಎಚ್ ಪಿ.ಜಯಪ್ರಕಾಶ್ ಅವರು ಸ್ವಾಗತಿಸಿದರು. ಡಾ.ದವಿತ್ ರಾಜು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News