×
Ad

ದ.ಕ.ಜಿಲ್ಲೆಯಲ್ಲಿ ರೆಡ್‌ ಅಲರ್ಟ್: ಸನ್ನದ್ಧ ಸ್ಥಿತಿಯಲ್ಲಿ ವಿಪತ್ತು ನಿರ್ವಹಣಾ ತಂಡ

Update: 2025-05-26 23:15 IST

ಮಂಗಳೂರು, ಮೇ 26: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದ.ಕ.ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು ವ್ಯಾಪಕ ಮಳೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸನ್ನದ್ಧ ಸ್ಥಿತಿಯಲ್ಲಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ಇನ್ಸಿಡೆಂಟ್ ಕಮಾಂಡರ್‌ಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಬೇಕು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ನಿರ್ದೇಶನ ನೀಡಲಾಗಿದೆ. ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ 60 ವಾರ್ಡ್‌ಗಳಿಗೆ ಇಂಜಿನಿಯರ್‌ಗಳನ್ನು ಮತ್ತು 223 ಗ್ರಾಪಂ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳಾಗಿ ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ಇನ್ಸಿಡೆಂಟ್ ಕಮಾಂಡರ್‌ಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ 135 ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಶಾಲೆ ಮತ್ತು ಅಂಗನವಾಡಿಗಳ ಹತ್ತಿರದ ಪ್ರದೇಶದಲ್ಲಿ ಅಪಾಯಕಾರಿ ಮರಗಳ ಕೊಂಬೆ, ವಿದ್ಯುತ್ ತಂತಿಗಳಿದ್ದಲ್ಲಿ ಅವುಗಳನ್ನು ತೆರವುಗೊಳಿಸಲು ಮೆಸ್ಕಾಂ ಮತ್ತು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಶಾಲೆಗಳ ಸುರಕ್ಷತೆಯ ಕುರಿತು ಇನ್ಸಿಡೆಂಟ್ ಕಮಾಂಡರ್, PRED Engineer ಮತ್ತು ಶಾಲಾ ಮುಖ್ಯ ಶಿಕ್ಷಕರು ಜಂಟಿ ಸಮೀಕ್ಷೆ ನಡೆಸಿ ಕಟ್ಟಡ ಸುರಕ್ಷತೆ ದೃಡೀಕರಣ ಪತ್ರವನ್ನು ನೀಡಲು ಸೂಚಿಸಿದೆ. 25 ಸಿಬ್ಬಂದಿಗಳ ಎನ್‌ಡಿಆರ್‌ಎಫ್ ತಂಡವನ್ನು ಪುತ್ತೂರು ತಾಲೂಕಿನಲ್ಲಿ ಹಾಗೂ 10 ಸಿಬ್ಬಂದಿಗಳ ಎಸ್‌ಡಿಆರ್‌ಎಫ್ ತಂಡವನ್ನು ಸುಬ್ರಮಣ್ಯದಲ್ಲಿ ನಿಯೋಜಿಸಲಾಗಿದೆ. ತುರ್ತು ಸಂದರ್ಭ ರಕ್ಷಣಾ ಕಾರ್ಯ ನಿರ್ವಸಲು 26 ಬೋಟ್, ಜೆಸಿಬಿ ಯಂತ್ರ, ಟಿಪ್ಪರ್, ಕ್ರೇನ್ ಇತ್ಯಾದಿ ಸನ್ನದ್ದ ಸ್ಥಿತಿಯಲ್ಲಿರಿಸಲಾಗಿದೆ.

ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ನಿಷೇಧಿಸಿದೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ದೋಣಿಗಳು ಕೂಡಲೇ ದಡ ಸೇರುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರು/ಸಾರ್ವಜನಿಕರು ಗುಡ್ಡ ಪ್ರದೇಶದ ಚಾರಣಕ್ಕೆ, ನದಿ ತೀರಕ್ಕೆ, ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಪಾಯಕಾರಿ ಪ್ರದೇಶ ಮತ್ತು ಕಾಲುಸಂಕ ಸೇತುವೆಗಳನ್ನು ಗುರುತಿಸಿ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗೃತೆ ವಹಿಸಲು ಸೂಚಿಸಲಾಗಿದೆ. ವಿದ್ಯುತ್ ತಂತಿ ಹಾಗೂ ಕಂಬದ ಹತ್ತಿರ ಸಾರ್ವಜನಿಕರು ಹೋಗದಂತೆ ಜಾಗೃತೆ ವಹಿಸಲು, ಅಪಾಯಕಾರಿ ತಂತಿ. ಕಂಬಗಳು ಕಂಡುಬಂದಲ್ಲಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕದಲ್ಲಿಟ್ಟುಕೊಂಡು ತುರ್ತು ಸಂದರ್ಭ ಅವಶ್ಯಕತೆ ಇದ್ದಲ್ಲಿ ಜನರನ್ನು ಸಾಗಿಸಲು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು ಹಾಗೂ ವಿಪತ್ತು ನಿರ್ವಹಣೆಯನ್ನು ಕಡ್ಡಾಯವಾಗಿ ನಿರ್ವಹಿಸಲು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News