ತಿಮಿಂಗಿಲ ವಾಂತಿಗೆ ಭಾರೀ ಬೇಡಿಕೆ

Update: 2023-11-26 06:20 GMT

ಅಕ್ರಮ ಸಾಗಾಟ ಮಾರಾಟ ಪ್ರಕರಣದ ಸಂದರ್ಭ ಈ ಅಂಬರ್ ಗ್ರೀಸನ್ನು ನಾವು ಪರಿಶೀಲಿಸಿ ವಶಪಡಿಸಿಕೊಳ್ಳುತ್ತೇವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವಶಪಡಿಸಿಕೊಂಡ ಬಳಿಕ ನಾವು ಅದನ್ನು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇವೆ. ಮುಂದಿನ ಪ್ರಕ್ರಿಯೆ ಅರಣ್ಯ ಇಲಾಖೆಯಿಂದ ನಡೆಯುತ್ತದೆ.

 ಪಿ.ಎ. ಹೆಗಡೆ, ಎಸಿಪಿ, ಸಿಸಿಬಿ ಘಟಕ, ಮಂಗಳೂರು


ಮಂಗಳೂರು: ಸಮುದ್ರ ಜೀವಿ ತಿಮಿಂಗಿಲದ ವಾಂತಿಗೂ ಕೋಟಿಗಟ್ಟಲೆ ಬೆಲೆಯಿದೆ. ಅಂಬರ್ ಗ್ರೀಸ್ ಎಂದು ಕರೆಯಲ್ಪಡುವ ತಿಮಿಂಗಿಲ ವಾಂತಿಯ ವ್ಯವಹಾರಕ್ಕೆ ಭಾರತದಲ್ಲಿ ನಿಷೇಧವಿದ್ದು, ವಿದೇಶದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಹಾಗಾಗಿಯೇ ಗುಪ್ತವಾಗಿ ಕಾರ್ಯಾಚರಿಸುವ ಈ ತಿಮಿಂಗಿಲ ವಾಂತಿ ವ್ಯವಹಾರ ಜಾಲ ಸಕ್ರಿಯವಾಗಿದ್ದು, ಈ ವರ್ಷದಲ್ಲಿ ಈವರೆಗೆ ಮಂಗಳೂರು ಸಿಸಿಬಿ ಪೊಲೀಸರೇ ನಾಲ್ಕು ಪ್ರಕರಣಗಳಲ್ಲಿ 12 ಕೆಜಿ ತೂಕದ ಅಂಬರ್ಗ್ರೀಸ್ ಪತ್ತೆ ಹಚ್ಚಿದ್ದಾರೆ. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಅಂಬರ್ ಗ್ರೀಸ್ ಕೆಜಿಯೊಂದಕ್ಕೆ ಕೋಟಿ ರೂ. ಬೆಲೆ ಬಾಳುತ್ತದೆ.!

ಹಸಿಯಾಗಿದ್ದರೆ ಪೇಸ್ಟ್ನಂತಿರುವ ಜೇನುತುಪ್ಪದ ಬಣ್ಣದಲ್ಲಿರುವ ಈ ತಿಮಿಂಗಿಲ ವಾಂತಿ ಗಟ್ಟಿಯಾಗುತ್ತಾ ಹೋದಂತೆ ಕ್ರಿಸ್ಟಲ್ ರೂಪವನ್ನು ಪಡೆಯುತ್ತದೆ. ಇದು ಸುವಾಸನೆ ಯಿಂದ ಕೂಡಿರುವು ದರಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಇದನ್ನು ಸುಗಂದ ದ್ರವ್ಯ ಹಾಗೂ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಹಾಗಾಗಿಯೇ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಡಿಮ್ಯಾಂಡ್.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ತಿಮಿಂಗಿಲ ವಾಂತಿಯನ್ನು ಹೊಂದುವುದು ಅಥವಾ ವ್ಯವಹಾರ ಮಾಡು ವುದು ಅಪರಾಧ. ಹಾಗಾಗಿ ಕಳ್ಳ ಸಾಗಾಟ-ಮಾರಾಟ- ವ್ಯವಹಾರದ ಮೂಲಕ ಇದು ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲಾಗುತ್ತದೆ. ಸಮುದ್ರದಲ್ಲಿ ಈ ಅಂಬರ್ಗ್ರೀಸ್ ಸಿಗುವುದರಿಂದ ಮೀನುಗಾರಿಕೆಗೆ ತೆರುವವರ ಮೂಲಕ ಇದು ಅಕ್ರಮ ಸಾಗಾಟಗಾರರ ಕೈ ಸೇರುವ ಸಾಧ್ಯತೆ ಅಧಿಕ. ಮೀನು ಗಾರರು ಮೀನುಗಾರಿಕೆ ಸಂದರ್ಭ ದೊರಕಿದ ಈ ತಿಮಿಂಗಿಲ ವಾಂತಿಯನ್ನು ಹಲವು ಪ್ರಕರಣಗಳಲ್ಲಿ ಅರಣ್ಯ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಒಪ್ಪಿಸಿದ ಪ್ರಕರಣಗಳೂ ಇವೆ.

ಅರಬಿ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ ಕಂಡು ಬರುವ ಸ್ಪರ್ಮ್ ವೇಲ್ ಅಥವಾ ಕ್ಯಾಚಲೋಟ್ ಹಲ್ಲಿನ ತಿಮಿಂಗಿಲಗಳು ಕಪ್ಪೆ ಬೊಂಡಾಸ್, ಮಣಕಿ ಎಂದು ಕರೆಯುವ ಮೀನುಗಳನ್ನು ತಿನ್ನುತ್ತವೆ. ಈ ಮೀನುಗಳು ಗಟ್ಟಿಯಾದ ಮೂಳೆ ಹೊಂದಿರುವುದರಿಂದ ಅವುಗಳನ್ನು ಕರಗಿಸಲು ತಿಮಿಂಗಿಲಗಳಿಗೆ ಕಷ್ಟವಾದಾಗ ಅದನ್ನು ಜಗಿದು ಉಗಿಯುತ್ತವೆ. ಉಗಿದಾಗ ವಿಪರೀತ ವಾಸನೆಯಿಂದ ಕೂಡಿರುವ ಈ ತಿಮಿಂಗಿಲ ವಾಂತಿ ಕೆಲ ದಿನಗಳಲ್ಲಿ ಗಟ್ಟಿಯಾದಂತೆ ಸುವಾಸನೆ ಪಡೆಯುತ್ತದೆ ಎನ್ನಲಾಗುತ್ತದೆ. ಕ್ರಿಸ್ಟಲ್ ರೂಪದಲ್ಲಿರುವ ಈ ಅಂಬರ್ ಗ್ರೀಸ್ಗೆ ಬಿಸಿ ಸೂಜಿಯಿಂದ ಚುಚ್ಚಿದಾಗ ಆಹ್ಲಾದಕರ ಸುವಾಸನೆ ಹೊರ ಸೂಸುತ್ತದೆ. ಭಾರತದಲ್ಲಿ ಸ್ಪರ್ಮ್ ವೇಲ್ ಸಂರಕ್ಷಿತ ಜಲಚರವಾಗಿರುವ ಕಾರಣ ಅದರ ವಾಂತಿಯ ವ್ಯವಹಾರಕ್ಕೂ ನಿಷೇಧವಿದೆ.

ಬಹುತೇಕವಾಗಿ ಕೇರಳ, ತಮಿಳುನಾಡು ಜತೆಗೆ ರಾಜ್ಯ ದಲ್ಲಿಯೂ ಅಂಬರ್ಗ್ರೀಸ್ ಅಕ್ರಮ ಸಾಗಾಟ- ಮಾರಾಟದ ಜಾಲ ಸಕ್ರಿಯವಾಗಿರುವ ಶಂಕೆ ಇದೆ. ಮಂಗಳೂರು ಸಿಸಿಬಿ ಪೊಲೀಸರು ಶನಿವಾರ ಪತ್ತೆಹಚ್ಚಿರುವ ಪ್ರಕರಣದಲ್ಲಿ ಅಂದಾಜು 1 ಕೋಟಿ 57 ಲಕ್ಷ ರೂ. ಹಾಗೂ ಇಬ್ಬರು ಆರೋಪಿಗಳು ಬಂಟ್ವಾಳ ದವರಾಗಿದ್ದರೆ, ಓರ್ವ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯವ. ನ.19ರಂದು ಮಂಗಳೂರಿನ ಕುಂಟಿಕಾನ ಜಂಕ್ಷನ್ ಬಳಿ ಉಡುಪಿ ಮೂಲದ ಆರೋಪಿಗಳಿಬ್ಬರಿಂದ 7.73 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದರು. ಕಳೆದ ವರ್ಷವೂ ನಗರದ ಕೆಲವು ಕಡೆ ಈ ಅಂಬರ್ಗ್ರೀಸ್ ಮಾರಾಟ ಯತ್ನ ನಡೆಸುತ್ತಿದ್ದ ಸಂದರ್ಭ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿದ್ದರು.


Writer - ವಾರ್ತಾಭಾರತಿ

contributor

Editor - Ismail

contributor

Byline - ವರದಿ: ಸತ್ಯಾ ಕೆ.

contributor

Similar News