×
Ad

ಕನ್ನಡ ಭಾಷಾ ಬೋಧಕರ ಅಸ್ಮಿತೆ ಉಳಿಸಿಕೊಳ್ಳುವ ಅಗತ್ಯವಿದೆ: ಪ್ರೊ.ಕೆ. ಚಿನ್ನಪ್ಪ ಗೌಡ

Update: 2024-08-30 21:00 IST

ಮಂಗಳೂರು, ಆ.30: ಉಪನ್ಯಾಸಕರು ಕನ್ನಡ ಭಾಷೆಯನ್ನು ಬೋಧಿಸುವ ಸಂದರ್ಭ ವಾಸ್ತವ ಮತ್ತು ಆದರ್ಶದ ನಡುವಿನ ಸಮನ್ವಯತೆಯನ್ನು ಸಾಧಿಸಿಕೊಳ್ಳಬೇಕು. ಅದಲ್ಲದೆ ಕನ್ನಡ ಭಾಷೆಯ ಬೋಧನೆಯನ್ನು ಮಾಡುವವರು ತಮ್ಮಲ್ಲಿರುವ ಸತ್ವವನ್ನು ಧೈರ್ಯದಲ್ಲಿ ಹೇಳಿಕೊಳ್ಳುವ ಮೂಲಕ ಕನ್ನಡ ಭಾಷೆ ಮತ್ತು ಕನ್ನಡ ಭಾಷಾ ಬೋಧಕರ ಅಸ್ಮಿತೆ ಉಳಿಸಿ ಕೊಳ್ಳುವ ಅಗತ್ಯವಿದೆ ಎಂದು ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿನ್ನಪ್ಪ ಗೌಡ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ದ.ಕ.ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘ ಹಾಗೂ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಗಳ ಪ್ರಾಚಾರ್ಯರ ಸಂಘದ ಸಹಯೋಗದಲ್ಲಿ ಶುಕ್ರವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಲಯೊಲಾ ಸಭಾಂಗಣದಲ್ಲಿ ದ.ಕ. ಜಿಲ್ಲೆಯ ಪ.ಪೂ ಕಾಲೇಜುಗಳ ಕನ್ನಡ ಭಾಷಾ ಉಪನ್ಯಾಸಕರಿಗಾಗಿ ನಡೆದ ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೌರ್ಯ, ದ್ವೇಷ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಹಾನುಭೂತಿ ಹಾಗೂ ಸಹ ಬಾಳ್ವೆಯನ್ನು ಬೆಳೆಸುವ ಕೆಲಸವನ್ನು ಕನ್ನಡ ಉಪನ್ಯಾಸಕರು ಮಾಡಬೇಕೆಂದು ಪ್ರೊ.ಕೆ. ಚಿನ್ನಪ್ಪ ಗೌಡ ಹೇಳಿದರು.

ದ.ಕ. ಜಿಲ್ಲಾ ಪಪೂ ಕಾಲೇಜುಗಳ ಪ್ರಾಚಾರ್ಯ ಸಂಘದ ಕಾರ್ಯದರ್ಶಿ ಅನುಸೂಯ ಕೆಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಲ್ಕಿ ಸರಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಸಂಜಯ್ ಬಿ.ಎಸ್. ಸ್ವಾಗತಿಸಿದರು. ಕೋಶಾಧಿಕಾರಿ ಜಾನೆಟ್ ಪಿಂಟೋ ವಂದಿಸಿದರು. ಕಾರ್ಯದರ್ಶಿ ಡಾ.ಸುಧೀರ್ ನಾಯ್ಕ್ ಎಚ್.ಕಾರ್ಯಕ್ರಮ ನಿರೂಪಿಸಿದರು.

*ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಕುಮಾರಸ್ವಾಮಿ ಎಚ್., ಬೆಳ್ತಂಗಡಿಯ ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ರಾಮಚಂದ್ರ ಭಟ್ ಕಾರ್ಯಾಗಾರ ನಡೆಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News