ಬಿಸಿಯೂಟ ನೌಕರರ ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀಕ್ಷ್ಣ: ಪದ್ಮಾವತಿ ಶೆಟ್ಟಿ
ಮಂಗಳೂರು, ನ. 16: ಬೆಂಗಳೂರಿನಲ್ಲಿ ಅಕ್ಟೋಬರ್ 30ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಬಿಸಿಯೂಟ ಕಾರ್ಮಿಕರ 16 ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀಕ್ಷ್ಣಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿ ಹೇಳಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ಕಚೇರಿ ಎದುರು ಗುರುವಾರ ಆಯೋಜಿಸಲಾದ ಅಕ್ಷರ ದಾಸೋಹ ನೌಕರರ ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷರಾದ ಭವ್ಯ ಮಾತನಾಡಿ, ರಾಜ್ಯ ಸರಕಾರ ಹೋರಾಟದ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿ ಬೇಡಿಕೆಗಳ ಈಡೇರಿ ಸಲು ಭರವಸೆ ನೀಡಿರುವುದು ಆಶಾದಾಯಕವಾಗಿದೆ. ಆದರೆ ಮಂಗಳೂರು ತಾಲೂಕಿನ 9 ಮಂದಿ ಕಾರ್ಮಿಕರಿಗೆ ಕಳೆದ ಜೂನ್ ತಿಂಗಳಿಂದ ವೇತನ ಮತ್ತು 17 ಮಂದಿ ಕಾರ್ಮಿಕರಿಗೆ ಇನ್ನೂ ಎರಡು ತಿಂಗಳ ವೇತನ ಬಂದಿಲ್ಲ. ಈ ಕಡಿಮೆ ವೇತನಕ್ಕೆ ಈ ರೀತಿ ಅಲೆದಾಡುವ ಸ್ಥಿತಿ ಖಂಡನೀಯ ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಬೆಂಗಳೂರಿನಲ್ಲಿ ಸರಕಾರ ಮತ್ತು ನಾಯಕರೋಂದಿಗೆ ನಡೆದಿರುವ ಮಾತುಕತೆಯ ಬಗ್ಗೆ ವಿವರಿಸಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಅಕ್ಷರ ದಾಸೋಹ ನೌಕರರ ಚಾರಿತ್ರಿಕ ಹೋರಾಟ ನಡೆದಿದೆ. ನಿರಂತರ 10ದಿನಗಳ ರಾಜ್ಯ ಮಟ್ಟದ ಹೋರಾಟ ನಡೆದಿದೆ. ರಾಜ್ಯ ಸರಕಾರ ನುಡಿದಂತೆ ನಡೆಯಬೇಕು. ಭರವಸೆಗಳನ್ನು ಈಡೇರಿ ಸಬೇಕು.ಇಲ್ಲದಿದ್ದರೆ ಸರಕಾರದ ಮೇಲೆ ಜನ ನಂಬಿಕೆ ಕಳಕೊಳ್ಳುತ್ತಾರೆ ಎಂದು ಅವರು ಹೇಳಿದರು. ಸರಕಾರ ಬರಿ ಚುನಾವಣಾ ಘೋಷಣೆಗಳನ್ನು ಜಾರಿಗೊಳಿಸಿದರೆ ಸಾಲದು. ಬೇರೆ ಬೇರೆ ವಿಭಾಗಗಳ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದರು.
ಪ್ರತಿಭಟನೆಯ ನೇತೃತ್ವವನ್ನು ಪದಾದಿಕಾರಿಗಳಾದ ರತ್ನಮಾಲ, ಶಭಾನಾ ಬಾನು,ಅರುಣ,ಉಮಾವತಿ, ಲಲಿತ, ಆಶಾ ಮತ್ತಿತರರು ವಹಿಸಿದ್ದರು. ಶಬಾನಾ ಬಾನುರವರು ಸ್ವಾಗತಿಸಿ, ಲಲಿತಾ ವಂದಿಸಿದರು.