×
Ad

ವಿದ್ಯಾರ್ಥಿಗಳು ವಿಧೇಯತೆ ಮೈಗೂಡಿಸಿಕೊಳ್ಳಬೇಕು: ರಾಜ್ಯಪಾಲ ಗೆಹ್ಲೋಟ್

ಸಂತ ಅಲೋಶಿಯಸ್ ವಿವಿಯ ಕಾನೂನು, ಇಂಜಿನಿಯರಿಂಗ್ ಕೋರ್ಸ್ ಉದ್ಘಾಟನೆ

Update: 2026-01-16 15:14 IST

ಮಂಗಳೂರು, ಜ.16: ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲ, ಶೈಕ್ಷಣಿಕ ಸಾಧನೆಯ ಜತೆಗೆ ವಿಧೇಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

 

ನಗರದ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಇಂಜಿನಿಯರಿಂಗ್ ಹಾಗೂ ಕಾನೂನು ಪದವಿ ಕೋರ್ಸ್ಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

 

ಕಾನೂನು ಶಿಕ್ಷಣವು ಸಾಮಾಜಿಕ ನ್ಯಾಯ, ಸಂವಿಧಾನ ರಕ್ಷಣೆ, ಮಾನವ ಹಕ್ಕು ರಕ್ಷಣೆಯ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಾನೂನು ವಿದ್ಯಾರ್ಥಿಗಳು ಈ ಜ್ಞಾನವನ್ನು ಪಡೆದು ಸಂವಿಧಾನ ರಕ್ಷಕರಾಗಬೇಕು. ಪ್ರಧಾನಿಯವರ ಡಿಜಿಟಲ್ ಇಂಡಿಯಾ, ಆತ್ಮ ನಿರ್ಭರ ಭಾರತ, ಸ್ಟಾರ್ಟ್ ಅಪ್ಗಳ ಸ್ಥಾಪನೆಗೆ ಇಂಜಿನಿಯರಿಂಗ್ ಪದವೀಧರರು ಕೊಡುಗೆ ನೀಡಬೇಕು ಎಂದು ಹೇಳಿದರು.

 

ಹಿಂದೆ ನಲಂದಾ, ತಕ್ಷಶಿಲಾ ವಿಶ್ವವಿದ್ಯಾನಿಲಯಗಳು ಜ್ಞಾನದ ದಾಹ ತಣಿಸುವ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಧಾರೆಯೆರೆಯುತ್ತಿದ್ದವು. ವಿದೇಶಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಈ ಪರಂಪರೆಯ ಪುನರುತ್ಥಾನ ಆಗಬೇಕು ಎಂದು ಹೇಳಿದ ಅವರು, ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು.

 

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಕೊಡುಗೆ ದೊಡ್ಡದು. ಮಂಗಳೂರು 2.0 ಬಗ್ಗೆ ಯೋಚಿಸಬೇಕಾಗಿದ್ದು, ಸ್ಥಳೀಯ ಅಭಿವೃದ್ಧಿ ಜೊತೆಗೆ ಸ್ಥಳೀಯ ವಾಗಿ ಉದ್ಯೋಗ ಸೃಷ್ಟಿಸಿ, ಈ ನೆಲವನ್ನು ಇನ್ನಷ್ಟು ಸಮೃದ್ದಗೊಳಿಸಬೇಕಾಗಿದೆ ಎಂದರು.

ಶಿಕ್ಷಣ ಸಂಸ್ಥೆಯ ರೆಕ್ಟರ್ ಫಾ. ಮೆಲ್ವಿನ್ ಪಿಂಟೊ, ವಿವಿ ಕುಲಪತಿ ಫಾ. ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ರೊನಾಲ್ಡ್ ನಝರೆತ್, ಕಾನೂನು ಕಾಲೇಜಿನ ಡೀನ್ ಉದಯ್ ಕೃಷ್ಣ, ಇಂಜಿನಿಯರಿಂಗ್ ಕಾಲೇಜಿನ ಡೀನ್ ರುಬೇನ್ ಎಸ್. ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News