×
Ad

ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ

Update: 2026-01-27 14:52 IST

ಮೂಡುಬಿದಿರೆ: ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ನೂತನ ಕಚೇರಿಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕಲ್ಲಬೆಟ್ಟು ಸಹಕಾರಿ ಸಂಘದಿಂದ ವಿಭಜನೆಗೊಂಡು ಪ್ರತ್ಯೇಕ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸ್ಥಳೀಯ ಜನತೆಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು. ಈ ಭಾಗದ ಎಲ್ಲಾ ರೈತರಿಗೆ ಕೃಷಿ ಸಾಲದ ಸೌಲಭ್ಯ ಲಭಿಸಬೇಕು. ಸಾಲದ ಹಣದ ಕೊರತೆ ಉಂಟಾದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಂಘದ ನೆರವಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಈ ಸಂಘ ಸದೃಢವಾಗಿ ಬೆಳೆಯಲಿ ಎಂದು ಆಶಿಸಿದರು.

ಸಂಘವು ಶೀಘ್ರದಲ್ಲೇ ಸ್ವಂತ ಕಟ್ಟಡವನ್ನು ಹೊಂದಬೇಕು. ಮುಂದಿನ ಗಣರಾಜ್ಯೋತ್ಸವದಂದು ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವಂತಾಗಲಿ ಎಂದು ಹೇಳಿದರು. ಈಗಾಗಲೇ ಸಂಘದ ಪೀಠೋಪಕರಣಕ್ಕಾಗಿ ರೂ. 5 ಲಕ್ಷ ಅನುದಾನ ನೀಡಲಾಗಿದ್ದು, ಸ್ವಂತ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ರೂ. 10 ಲಕ್ಷ ಆರ್ಥಿಕ ಸಹಕಾರ ನೀಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಶಿರ್ತಾಡಿ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಪಡಿತರ ವಿಭಾಗವನ್ನು ಉದ್ಘಾಟಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು.

ಎಂಸಿಎಸ್ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್ ಉಳಿತಾಯ ಖಾತೆ ಪುಸ್ತಕವನ್ನು, ಸಿಇಒ ಚಂದ್ರಶೇಖರ್ ಎಂ. ಪದ್ಮಾಂಬ ನವೋದಯ ಸ್ವಸಹಾಯ ಸಂಘದ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿದರು. ಸಂಪತ್ ಸಾಮ್ರಾಜ್ಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ನವಮೈತ್ರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಹೊಸಬೆಟ್ಟು ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ನಿರ್ದೇಶಕ ಪದ್ಮಪ್ರಸಾದ್ ಜೈನ್, ಪೆರಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನೆಲ್ಲಿಕಾರು ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್, ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ವಸಂತ ಬೆರ್ನಾರ್ಡ್, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೆಸ್ ಡಿಸೋಜಾ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಶಿರ್ತಾಡಿ ಸಹಕಾರ ಸಂಘದ ಉಪಾಧ್ಯಕ್ಷ ಚಿಂತನ್ ಲೋಬೊ, ಸಿಇಒ ವಿಮಲಾಜಿ, ಜಿಲ್ಲಾ ಸಹಕಾರ ಸಂಘದ ವಿಲಾಸ್ ಕುಮಾರ್, ಕಟ್ಟಡ ಮಾಲೀಕ ಹಸನಬ್ಬ ಸೇರಿದಂತೆ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News