ಮಂಗಳೂರು | ಇಕ್ರಾ ಅರೆಬಿಕ್ ಸ್ಕೂಲ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ
ಮಂಗಳೂರು: ನಗರದ ಇಕ್ರಾ ಅರೆಬಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಬಹು ಸಂಸ್ಕೃತಿಗಳ ದೇಶವಾಗಿದ್ದು, ಜನರು ಪರಸ್ಪರ ಪ್ರೀತಿ, ವಿಶ್ವಾಸ, ಘನತೆ ಮತ್ತು ಗೌರವದೊಂದಿಗೆ ಬದುಕುವ ಅವಕಾಶವನ್ನು ಸಂವಿಧಾನ ನೀಡಿದೆ. ಆ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಚನಾ ಸಂಸ್ಥೆಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅವರು, ದೇಶದ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳು ಹಾಗೂ ನಮ್ಮ ಕರ್ತವ್ಯಗಳ ಕುರಿತು ವಿವರಿಸಿದರು. ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ಜೀವನದಲ್ಲಿ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಗೋಲ್ಡ್ ಸೂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ರಾ ಅರೆಬಿಕ್ ಸ್ಕೂಲ್ ಅಧ್ಯಕ್ಷ ಮೌಲಾನಾ ಸಾಲಿಂ ನದ್ವಿ ಅವರು ವಹಿಸಿ, ಗಣರಾಜ್ಯ ದಿನದ ಮಹತ್ವವನ್ನು ವಿವರಿಸಿ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮವನ್ನು ಮುಹಮ್ಮದ್ ಹುಝಾಪ ಅವರು ನಿರೂಪಿಸಿದರು.