×
Ad

ಮಂಗಳೂರು: ʼಇಂಡಿಪೆಂಡೆನ್ಸ್ ಕಪ್ʼ ಫುಟ್ಬಾಲ್ ಪಂದ್ಯಾಟ ಸಮಾಪನ

Update: 2025-08-15 22:10 IST

ಮಂಗಳೂರು: ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಕರಾವಳಿ ಉತ್ಸವ ಮೈದಾನದಲ್ಲಿ ಕಳೆದ 15ದಿನಗಳಿಂದ ನಡೆದ ಫುಟ್ಬಾಲ್ ಪಂದ್ಯ ಶುಕ್ರವಾರ ಸಮಾಪನಗೊಂಡಿತು.

ಹೈಸ್ಕೂಲ್ ವಿಭಾಗದ ಪಂದ್ಯದಲ್ಲಿ ಕುನಿಲ್ ನಾಟೆಕಲ್ ತಂಡವು ಮಣಿಪಾಲ್ ತಂಡವನ್ನು 2-1 ಗೋಲಿನಿಂದ ಸೋಲಿಸಿ ಪ್ರಶಸ್ತಿ ಪಡೆಯಿತು. ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಯೆನೆಪೋಯ ತಂಡವು ಟೈಬೇಕರ್ ಮೂಲಕ ಸಂತ ಅಲೋಶಿಯಸ್ ಕಾಲೇಜ್ ತಂಡವನ್ನು 5-4 ಗೋಲಿನಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.

ಪದವಿ ವಿಭಾಗದಲ್ಲಿ ಯೆನೆಪೋಯ ಕಾಲೇಜ್ ತಂಡವು ಉಳ್ಳಾಲ ಟಿಪ್ಪುಸುಲ್ತಾನ್ ತಂಡವನ್ನು 3-0 ಗೋಲಿನಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿತು.

ಈ ಮೊದಲು ನಡೆದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ಪ್ರಶಸ್ತಿಯನ್ನು ಕಲ್ಲಾಪಿನ ಪೀಸ್ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಮೂಡುಬಿದಿರೆಯ ಅಲ್-ಫುರ್ಖಾನ್ ಶಾಲೆಯು ದ್ವಿತೀಯ ಪ್ರಶಸ್ತಿ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಕೊಲ್ಯದ ಸಂತ ಜೋಸಫ್ ಜಾಯ್ಲೆಂಡ್ ಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಮೌಂಟ್ ಕಾರ್ಮೆಲ್ ಶಾಲೆಯು ದ್ವಿತೀಯ ಸ್ಥಾನ ಪಡೆಯಿತು.

ಕಾಲೇಜು ವಿಭಾಗದ ಮಹಿಳೆಯರ ಪಂದ್ಯಾಟದಲ್ಲಿ ಸಂತ ಅಲೋಸಿಯಸ್ ಪದವಿ ಪೂರ್ವ ಕಾಲೇಜು ತಂಡವು ತನ್ನದೇ ಸಂಸ್ಥೆಯ ಪದವಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು.

ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅನಿವಾಸಿ ಉದ್ಯಮಿ ಝಕರಿಯ ಜೋಕಟ್ಟೆ ಆರೋಗ್ಯವಂತ ಜೀವನಕ್ಕೆ ಕ್ರೀಡಾಕೂಟಗಳು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ದ.ಕ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದರು.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಉದ್ಯಮಿ ಮನ್ಸೂರು ಆಝಾದ್, ಎ.ಕೆ. ಸಾಜಿದ್, ಮೋಹನ್ ಬೆಂಗರೆ, ಅಬ್ದುಲ್ಲ ಮೋನು ಕತರ್, ಒಲಿಂಪಿಕ್ ಸ್ಪೋರ್ಟ್ಸ್‌ನ ಸಮೀರ್, ಶರೀಫ್, ಹಿರಿಯ ಕ್ರೀಡಾಪಟು ಪದ್ಮನಾಭ ಕುಮಾರ್, ಉಮೇಶ್ ಉಚ್ಚಿಲ್, ವಿಜಯ್ ಸುವರ್ಣ, ಹುಸೈನ್ ಬೋಳಾರ್, ಉಮೇಶ್ ಗಟ್ಟಿ, ಅನಿಲ್ ಪಿ.ವಿ., ಬಿ.ಬಿ.ಥಾಮಸ್, ನೋಬರ್ಟ್ ಸಲ್ದಾನ, ಅಬ್ದುಲ್ ಲತೀಫ್, ಆರಿಫ್ ಉಚ್ಚಿಲ, ಸುಜಿತ್ ಕೆ.ವಿ., ಅಶ್ಪಾಕ್, ನಾಸಿರ್, ಲಿನ್ಸನ್ ಸಿ.ಸಿ. ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ ಸ್ವಾಗತಿಸಿದರು. ಶಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹುಸೇನ್ ಬೋಳಾರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News