×
Ad

ಶೇ.5 ರಿಯಾಯಿತಿ ಯೋಜನೆ| ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿಸಿದರಿಗೆ ಅನ್ಯಾಯವಾಗಲಿದೆ ಎಂದ ವೇದವ್ಯಾಸ ಕಾಮತ್

Update: 2025-05-26 23:21 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ನೂತನ ಆದೇಶದಿಂದ ಸಾವಿರಾರು ಮಂದಿ ಆಸ್ತಿ ತೆರಿಗೆ ಪಾವತಿಸುವಾಗ ಶೇ.5ರಷ್ಟು ರಿಯಾಯಿತಿಯಿಂದ ವಂಚಿತರಾಗಿರುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಮನಪಾ ಸಹಿತ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತೀ ಆರ್ಥಿಕ ವರ್ಷದ ಆರಂಭದಿಂದ ಅಂದರೆ ಎ.30ರವರೆಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅದರನ್ವಯ ಅನೇಕರು ರಿಯಾಯಿತಿ ಸೌಲಭ್ಯ ಪಡೆದಿದ್ದಾರೆ. ಆದರೆ ರಾಜ್ಯ ಸರಕಾರವು ಮೇ 9 ರಂದು ಆದೇಶವೊಂದನ್ನು ಹೊರಡಿಸಿ ಜೂನ್ ಅಂತ್ಯದವರೆಗೆ 2025-26ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ರಿಯಾಯಿತಿಯ ಕಾಲಾವಧಿಯನ್ನು ವಿಸ್ತರಿಸಿದೆ. ಮನಪಾ ವ್ಯಾಪ್ತಿಯಲ್ಲಿ ಮೇ 11ರಿಂದ ಅನ್ವಯವಾಗಿದೆ. ಹೀಗಿರುವಾಗ ಮೇ 1ರಿಂದ 11ರವರೆಗೆ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿಯಿಂದ ಶೇ.5ರಷ್ಟು ರಿಯಾಯಿತಿ ನೀಡದೆ ಆಸ್ತಿ ತೆರಿಗೆ ವಸೂಲು ಮಾಡಲಾಗಿದೆ. ಇದರಿಂದ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದವರು ರಿಯಾಯಿತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಕಾಮತ್ ಆರೋಪಿಸಿದ್ದಾರೆ. ತಕ್ಷಣ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದವರಿಗೆ ನ್ಯಾಯ ದೊರಕಿಸಿಕೊಡಬೇಕು. ಐದು ಸಾವಿರಕ್ಕೂ ಅಧಿಕ ಮಂದಿಯಿಂದ ಸಂಗ್ರಹಿಸಲಾಗಿರುವ ಹೆಚ್ಚುವರಿ ತೆರಿಗೆಯನ್ನು ಹಿಂತಿರುಗಿಸಬೇಕು ಅಥವಾ ಮುಂದಿನ ಆರ್ಥಿಕ ವರ್ಷದ ಆಸ್ತಿ ತೆರಿಗೆಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಾಸಕ ಕಾಮತ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News