ಪತ್ರಕರ್ತ ನವೀನ್ ಸೂರಿಂಜೆಯವರ ‘ಸತ್ಯೊಲು’ ಕೃತಿ ಬಿಡುಗಡೆ
ಮಂಗಳೂರು, ಎ.20: ನಗರದ ಸಹೋದಯದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಪತ್ರಕರ್ತ ನವೀನ್ ಸೂರಿಂಜೆಯವರ ‘ಸತ್ಯೊಲು’ ಶ್ರಮಿಕರ ಜನಪದ ಐತಿಹ್ಯ ಕೃತಿ ಬಿಡುಗಡೆಗೊಂಡಿತು.
ಬಹುಜನ ಚಿಂತಕಿ ಅತ್ರಾಡಿ ಅಮೃತಾ ಶೆಟ್ಟಿ ಅವರು ನವೀನ್ ಸೂರಿಂಜೆ ಅವರ ಹೆತ್ತವರಾದ ಸುಂದರ ಶೆಟ್ಟಿ ಮತ್ತು ರತ್ನಾ ಎಸ್ ಶೆಟ್ಟಿ ದಂಪತಿಗೆ ಕೃತಿಯನ್ನು ಒಪ್ಪಿಸುವ ಮೂಲಕ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಹುಜನ ಚಿಂತಕಿ ಅತ್ರಾಡಿ ಅಮೃತಾ ಶೆಟ್ಟಿ ಅವರು ‘ಯಾರಾದರೂ ಸಂಶೋಧನೆ ಮಾಡಿದವರು ಕೊನೆಗೆ ಫಲಿತಾಂಶವನ್ನು ಕೊಡುತ್ತಾರೆ. ಆದರೆ ನವೀನ್ ಸೂರಿಂಜೆ ಅವರು ಕೃತಿಯಲ್ಲಿ ಫಲಿತಾಂಶವನ್ನು ಕೊಟ್ಟಿಲ್ಲ. ಅದನ್ನು ನಿರ್ಣಯಿಸುವ ಜವಾಬ್ದಾರಿಯನ್ನು ಓದುಗರಿಗೆ ಬಿಟ್ಟಿದ್ದಾರೆ ಎಂದು ಹೇಳಿದರು.
ತುಳುನಾಡಿನಲ್ಲಿ ಹೆಣ್ಣಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ನಮ್ಮದು ಮಾತೃಮೂಲೀಯ ಸಂಸ್ಕೃತಿಯಾಗಿದೆ. ತಾಯಿ ಎನ್ನುವುದು ಸತ್ಯ. ತಂದೆ ಎನ್ನುವುದು ನಂಬಿಕೆಯಾಗಿದೆ. ಸಂಸಾರವನ್ನು ಕಟ್ಟುವವಳು ಹೆಣ್ಣು, ಆಳುವವರು ಗಂಡು ಎಂದರು.
ತುಳುನಾಡಿನಲ್ಲಿ ಕೃಷಿ ನಶಿಸತೊಡಗಿದಂತೆ ಹೆಣ್ಣಿನ ಮೌಲ್ಯ ಕುಸಿಯಿತು. ಇದರೊಂದಿಗೆ ಪಾರಂಪರಿಕ ಭೂತಾರಾಧನೆ ಮೌಲ್ಯವು ಕಡಿಮೆಯಾಯಿತು. ದೈವ ನಮ್ಮ ಕುಟುಂಬದ ಸದಸ್ಯ ಎಂಬ ಕಾಲ ಒಂದಿತ್ತು. ತಲೆಗೊಂದು ಸದಸ್ಯನ ಹರಕೆ ಇತ್ತು. ಭೂತ ಕೋಲದ ವೇಳೆ ಕುಟುಂಬದ ಎಲ್ಲರೂ ಸೇರುತ್ತಿದ್ದರು. ಆದರೆ ಭೂತಾರಾಧನೆ ಇವತ್ತು ಪಕ್ಕಾ ಪ್ಯಾಕೆಜ್ ಪ್ರೋಗ್ರಾಂ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿಂತಕ, ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಈಗ ತುಳುನಾಡಿನಲ್ಲಿ ದೈವದ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇದೇ ವೇಳೆ ನವೀನ್ ಸೂರಿಂಜೆಯವರ ಪುಸ್ತಕ ಹೊರಬಂದಿದೆ. ದೈವಪಾತ್ರಿಗಳ ಬದುಕಿನ ಬಗ್ಗೆ ಯೋಚನೆ ಮಾಡಬೇಕು. ಕಷ್ಟದಲ್ಲಿರುವ ಸರಕಾರ ಮಾಸಾಸನ ನೀಡಬೇಕು. ದೈವಪಾತ್ರಿಗಳ ಬಗ್ಗೆ ದಾಖಲೀಕರಣ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಜನಪದ ಸಂಶೋಧಕ ಡಾ.ಗಣನಾಥ ಎಕ್ಕಾರು ಅವರು ಕೃತಿಯ ಕುರಿತು ಮಾತನಾಡಿ ಒಬ್ಬ ಸಂಶೋಧಕನಲ್ಲಿ ಇರಬೇಕಾದ ಶ್ರಮ. ಆಳವಾದ ಅಧ್ಯಯನ, ಸತ್ಯದ ಹುಡುಕಾಟದ ತುಡಿತ ಇವೆಲ್ಲವನ್ನೂ ನವೀನ್ ಸೂರಿಂಜೆಯವರ ಅಧ್ಯಯನದಲ್ಲಿ ಕಾಣಬಹುದಾಗಿದೆ. ನವೀನರ ಕೃತಿ ಹಿಂದೆ ಬಂದಿರುವ ಎಲ್ಲ ಕೃತಿಗಿಂತ ಹೆಚ್ಚು ಭಿನ್ನವಾಗಿದೆ ಎಂದು ನುಡಿದರು.
ಡಿಎಸ್‌ಎಸ್ (ಪ್ರೊ.ಕೃಷ್ಣಪ್ಪ ಬಣ) ಸಂಚಾಲಕ ಕೃಷ್ಣಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೃತಿಯ ಲೇಖಕರಾದ ಪತ್ರಕರ್ತ ನವೀನ್ ಸೂರಿಂಜೆ, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಜದಕಟ್ಟೆ ಉಪಸ್ಥಿತರಿದ್ದರು.
ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನೀರ್ ಕಾಟಿಪಳ್ಳ ಮತ್ತು ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.