ಜು.24: ದ.ಕ.ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ; ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ
ಮಂಗಳೂರು, ಜು.23: ದ.ಕ.ಜಿಲ್ಲೆಯಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮುಂದಿನ ಒಂದೆರಡು ದಿನಗಳ ಕಾಲ ಜಿಲ್ಲೆಯಲ್ಲಿ ನೈರುತ್ಯ ಮುಂಗಾರು ಮಾರುತಗಳು ಪ್ರಬಲವಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಜು.24ರಂದು ದ.ಕ.ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.
ಜಿಲ್ಲೆಯ ಗ್ರಾಮಿಣ ಭಾಗದಲ್ಲಿ ಬುಧವಾರ ಮುಂಜಾನೆಯಿಂದಲೇ ನಿರಂತರ ಮಳೆಯಾಗಿದೆ. ದ.ಕ. ಜಿಲ್ಲೆ ಯಲ್ಲಿ ಗರಿಷ್ಠ 30.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಕಡಲತೀರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಯಲ್ಲಿ ಬಿದ್ದ ಮಳೆಯಲ್ಲಿ 53.1 ಮಿ.ಮೀ ಮಂಗಳೂರಿನಲ್ಲೇ ಹೆಚ್ಚು ಮಳೆಯಾಗಿದೆ.
ಜುಲೈ 26ರವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರಿ ಗಾಳಿ ಬೀಸುವುದರಿಂದ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.