ಕಡಬ | ಪಿಡಿಒ, ವಿಎಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ತರಬೇತಿ
ಮಂಗಳೂರು,ಡಿ.22: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ್ ಖಜೂರೆ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು, ಮಕ್ಕಳ ಹಕ್ಕುಗಳ ಅರಿವು ಗ್ರಾಮಗಳ ಕೊನೆಯ ನಾಗರಿಕರಿಗೂ ತಲುಪಬೇಕು ಎಂದು ಹೇಳಿದರು.
ಪ್ರತಿಯೊಬ್ಬ ಅಧಿಕಾರಿಯೂ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರತಿ ಗ್ರಾಮವೂ ಮಕ್ಕಳ ಹಕ್ಕು ಉಲ್ಲಂಘನೆರಹಿತ ಗ್ರಾಮ ಆಗುವಂತೆ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ರೆನ್ನಿ ಡಿಸೋಜ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯ ಕಾಯ್ದೆ -2015 ಮತ್ತು ಅದರ ತಿದ್ದುಪಡಿ, ಹಾಗೂ ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣೆ ಘಟಕದ ಅಧಿಕಾರಿಗಳಾದ ಕುಮಾರ ಹಾಗೂ ವಜೀರ್ ಅಹ್ಮದ್ ಭಾಗವಹಿಸಿ ದತ್ತು ತೆಗೆದುಕೊಳ್ಳುವ ಬಗ್ಗೆ ಹಾಗೂ ಮಗಳನ್ನು ಉಳಿಸಿ ಮಗಳನ್ನು ಓದಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ವಿವಾಹ, ಬಾಲ ಕಾರ್ಮಿಕತೆ, ಲೈಂಗಿಕ ದೌರ್ಜನ್ಯ ಮತ್ತು ನಿರ್ಲಕ್ಷ್ಯ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ ಸ್ವಾಗತಿಸಿ, ಮೇಲ್ವಿಚಾರಕಿ ಭವಾನಿ ವಂದಿಸಿದರು. ಮೇಲ್ವಿಚಾರಕಿ ವನಿತ ನಿರೂಪಿಸಿದರು.