×
Ad

ಕಡಬ: ಅನೈತಿಕ ಪೊಲೀಸ್ ಗಿರಿ ಪ್ರಕರಣ ; ನಾಲ್ವರ ಬಂಧನ

Update: 2024-02-23 16:08 IST

ಕಡಬ : ಮರ್ದಾಳ ಎಂಬಲ್ಲಿ ಗುರುವಾರದಂದು ಅನೈತಿಕ ಪೊಲೀಸ್ ಗಿರಿ ಪ್ರಕರಣವೊಂದಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಘಟನೆಯ ವಿವರ: ಮರ್ದಾಳ ಶಿವಾಜಿನಗರ ನಿವಾಸಿ ದಿ.ಇಲ್ಯಾಸ್ ಎಂಬವರ ಪುತ್ರ ಫಯಾಜ್ ಎಂಬಾತ ಗುರುವಾರ ಸಂಜೆ ತನ್ನ ತಾಯಿ ಮತ್ತು ಸಹೋದರರೊಂದಿಗೆ ಮನೆಯಲ್ಲಿದ್ದ ಸಂದರ್ಭ, ಸುಮಾರು 7 ಗಂಟೆಯ ವೇಳೆಗ ಮನೆಯ ಹತ್ತಿರಕ್ಕೆ ಮಗುವನ್ನು ಎತ್ತಿಕೊಂಡು ಬಂದ ಅಪರಿಚಿತ ಮಹಿಳೆಯೊಬ್ಬಳು ರಿಯಾಝ್ ನ ಮನೆ ಯಾವುದು ಎಂದು ಕೇಳಿದ್ದಾರೆ. ಈ ವೇಳೆ ಇದು ರಿಯಾಝ್ ನ ಮನೆ ಅಲ್ಲ. ನೀವು ಇಲ್ಲಿಂದ ತೆರಳಿ ಎಂದು ಹೇಳಿದಾಗ, ಅಪರಿಚಿತ ಮಹಿಳೆಯು ಮನೆ ಮುಂಭಾಗದಲ್ಲಿ ಅಳುತ್ತಾ ನಿಂತಿದ್ದರು ಎನ್ನಲಾಗಿದೆ.

ಆ ಸಂದರ್ಭದಲ್ಲಿ ಫಯಾಝ್ ನ ತಾಯಿ ಅಪರಿಚಿತ ಮಹಿಳೆಯನ್ನು ಸಮಾಧಾನಪಡಿಸಿ, ಮನೆಯ ಪಕ್ಕದ ಇಬ್ರಾಹಿಂ ಎಂಬ ಹುಡುಗನ ಜೊತೆ ಈ ಮಹಿಳೆಯನ್ನು ಮರ್ದಾಳ ಬಸ್ಸು ನಿಲ್ದಾಣದ ಹತ್ತಿರ ಬಿಟ್ಟು ಬರಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಇಬ್ರಾಹಿಂ ಆಕೆಯನ್ನು ಕೂರಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಅದೇ ಸಮಯಕ್ಕೆ ಆರೋಪಿಗಳಾದ ಜಿನಿತ್ ಕುಮಾರ್, ಉಮೇಶ್, ವಿನುತ್, ನಾಗೇಶ್ ಹಾಗೂ ಶ್ರೀಕರ ಸೇರಿದಂತೆ ಇತರ 10 ರಿಂದ 15 ಜನರು ಬಂದು ಫಯಾಝ್ ನನ್ನು ಕರೆದು ಸ್ಕೂಟರ್ ನಲ್ಲಿ ಹೋದ ಮಹಿಳೆಯ ಬಗ್ಗೆ ವಿಚಾರಿಸಿದ್ದು, ಈ ವೇಳೆ ನೀಡಿದ ಉತ್ತರದಿಂದ ಅಸಾಮಾಧಾನಿತರಾದ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಫಯಾಝ್ ರ ತಾಯಿ ಸಫಿಯಾ ತಡೆಯಲು ಬಂದಿದ್ದು, ಅವರಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಫಯಾಝ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News