ಕಾಜೂರು ದರ್ಗಾ ಶರೀಫ್ ಉರೂಸ್ ಸಂಭ್ರಮ
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಕ್ಕೆ ನಾನಾ ಜಿಲ್ಲೆಗಳ ಜತೆಗೆ ಹೊರ ರಾಜ್ಯಗಳಿಂದಲೂ ಸರ್ವ ಧರ್ಮದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರ ಅನುಕೂಲದ ದೃಷ್ಟಿಯಿಂದ ದರ್ಗಾದ ಆಡಳಿತ ಮಂಡಳಿಯ ಬೇಡಿಕೆಯಂತೆ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಸಂಬಂಧಪಟ್ಟ ಸಚಿವರ ಜತೆ ಮಾತುಕತೆ ನಡೆಸಿ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ರವಿವಾರ ಕಾಜೂರು ದರ್ಗಾ ಶರೀಫ್ ಇದರ ಉರೂಸ್ ಸಂಭ್ರಮಕ್ಕೆ ಭೇಟಿ ನೀಡಿ ಮಾತನಾಡಿದರು.
ದರ್ಗಾದ ಶಿಕ್ಷಣ ಸಂಸ್ಥೆಗೆ ಬಸ್ಸನ್ನು ಒದಗಿಸಲು ಕಂಪೆನಿಗಳ ಸಿಎಸ್ ಆರ್ ಅನುದಾನ ಒದಗಿಸಲು ಮನವಿ ಸಲ್ಲಿ ಸಿದ್ದು, ಅದರ ಕುರಿತು ಕೂಡ ಸಂಬಂಧಪಟ್ಟ ಕಂಪೆನಿಗಳ ಜತೆ ಮಾತುಕತೆ ನಡೆಸಿ ಅವಕಾಶವಿದ್ದರೆ ಅನುಕೂಲ ಒದಗಿಸಲು ಕ್ರಮಕೈಗೊಳ್ಳುತ್ತೇನೆ. ಕಾಜೂರು ದರ್ಗಾವು ಜಿಲ್ಲೆಯ ಗಡಿ ಭಾಗದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಸುಂದರ ಪರಿಸರದಲ್ಲಿದ್ದು, ಬಹಳ ಪವಿತ್ರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ ಎಂದರು.
ಸಚಿವರು ಗಣ್ಯರ ಸಮ್ಮುಖದಲ್ಲಿ ಚಾದರ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಸಮಿತಿಯ ವತಿಯಿಂದ ಸಚಿವರನ್ನು , ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಆರ್.ತಿಮ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ಪ್ರಮುಖರಾದ ಅಬ್ದುಲ್ ಕರೀಂ ಗೇರುಕಟ್ಟೆ, ಅಬ್ಬೋನು ಮದ್ದಡ್ಕ, ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ಇಸುಬು ಇಳಂತಿಲ, ಸಮದ್ ಕುಂಡಡ್ಕ, ದಾಸಪ್ಪ ಗೌಡ ಕಾಂಜಾನು, ಸುರೇಂದ್ರ ಕೊಲ್ಲಿ, ಶಾಹುಲ್ ಹಮೀದ್, ಚಂದ್ರಶೇಖರ, ಕೃಷ್ಣಪ್ಪ ಪೂಜಾರಿ, ಕೆ.ಯು. ಮುಹಮ್ಮದ್, ಬಿ.ಎಂ ಹಮೀದ್ ಹಾಜಿ ಉಜಿರೆ, ಎಚ್.ಮುಹಮ್ಮದ್ ವೇಣೂರು, ಕೆ.ಎಂ.ಮುಸ್ತಫಾ ಸುಳ್ಯ, ಲಕ್ಷ್ಮಣ ಗೌಡ, ಪ್ರವೀಣ್ ಫರ್ನಾಂಡೀಸ್ ಮೊದಲಾದವರು ಸಚಿವರ ಜತೆಗಿದ್ದರು.
ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಡಿ.ವೈ.ಉಮರ್, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಜತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಹಿರಿಯ ಸದಸ್ಯರಾದ ಅಬೂಬಕ್ಕರ್ ಮಲ್ಲಿಗೆಮನೆ, ಬದ್ರುದ್ದೀನ್ ಕಾಜೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತ ಅಶ್ರಫ್ ಆಲಿ ಕುಂಞಿ ಸ್ವಾಗತಿಸಿದರು.