×
Ad

ರಾಮಕುಂಜ: ತಂದೆ - ಮಗನ ನಡುವೆ ಜಗಳ; ಅಪ್ರಾಪ್ತ ವಯಸ್ಸಿನ ಮಗ ಮೃತ್ಯು, ತಂದೆಗೆ ಗಾಯ

Update: 2026-01-24 23:26 IST

ಕಡಬ: ತಂದೆ ಮತ್ತು ಅಪ್ರಾಪ್ತ ವಯಸ್ಸಿನ ಮಗನ ನಡುವಿನ ಜಗಳ ನಡೆದು ಮಗನ ಸಾವಿನಲ್ಲಿ ಅಂತ್ಯಗೊಂಡ ದಾರುಣ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ (60) ಮತ್ತು ಅವರ ಪುತ್ರ ಮೋಕ್ಷ (17) ನಡುವೆ ಶನಿವಾರ ಸಂಜೆ ಜಗಳವಾಗಿದ್ದು, ಈ ವೇಳೆ ಮೋಕ್ಷ ಗುಂಡೇಟು ತಗುಲಿ ಮೃತಪಟ್ಟಿದ್ದಾನೆ.

ಮೂಲತಃ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಳು ನಿವಾಸಿಯಾಗಿರುವ ವಸಂತ್‌ ರಿಗೆ ಪೆರ್ಲದ ಜಯಶ್ರೀ ಎಂಬವರೊಂದಿಗೆ ವಿವಾಹವಾಗಿತ್ತು. ಇವರಿಗೆ ಮೋಕ್ಷ ಏಕೈಕ ಪುತ್ರನಾಗಿದ್ದಾರೆ. ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜಾಗ ಖರೀದಿಸಿದ್ದ ವಸಂತ್ ಇಲ್ಲೇ ವಾಸವಿದ್ದರು. ಕೆಲ ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಸ್ತಿ ವಿಚಾರವಾಗಿ ಜಗಳವಾಗಿದ್ದು, ಒಂದು ತಿಂಗಳ ಹಿಂದೆ ಪತ್ನಿ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ.

ತಂದೆ ಮತ್ತು ಮಗ ಪಾದೆಯ ಮನೆಯಲ್ಲಿ ವಾಸವಿದ್ದು, ಶನಿವಾರ ಸಂಜೆ ಇವರೊಳಗೆ ಅದ್ಯಾವುದೋ ವಿಷಯಕ್ಕೆ ಜಗಳ ಉಂಟಾಗಿದೆ. ಈ ವೇಳೆ ತಂದೆ ವಸಂತ ಅಮೀನ್‌ರಿಗೆ ಚೂರಿ ಇರಿತದ ಗಂಭೀರ ಗಾಯಗಳಾಗಿವೆ. ಮಗ ಮೋಕ್ಷ ಮುಖಕ್ಕೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ.

ಈ ಮಧ್ಯೆ ತಂದೆಯೇ ಮಗನಿಗೆ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿ ವಸಂತ್ ಅಮೀನ್‌ರ ಪತ್ನಿ ಜಯಶ್ರೀ ಪೊಲೀಸ್ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕಾಗಿ ಜಗಳ ನಡೆದಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ, ಉಪ್ಪಿನಂಗಡಿ ವೃತ್ತ ನಿರೀಕ್ಷಕರಾದ ನಾಗರಾಜ್, ಕಡಬ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಮಹಾಜನ್, ಅಪರಾಧ ಸ್ಥಳ ತನಿಖಾಧಿಕಾರಿ ಅರ್ಪಿತಾ ಮತ್ತು ಕಾವ್ಯ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಗೆ ಚೂರಿಯಿಂದ ಇರಿದು ಮಗ ಆತ್ಮಹತ್ಯೆ?

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮೋಕ್ಷ ತನ್ನ ತಂದೆ ವಸಂತ ಅಮೀನ್‌ರ ಹೊಟ್ಟೆಗೆ ಚೂರಿಯಿಂದ ಇರಿದು ಬಳಿಕ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಕಡಬ ಠಾಣಾ ಪೊಲೀಸರು ತನಿಖೆಯ ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News