ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯಡಿ ಮಂಗಳೂರಿಗೆ 200 ಕೋಟಿ ರೂ. ಅನುದಾನ: ಸಚಿವ ಭೈರತಿ ಸುರೇಶ್
ಮಹಾಕಾಳಿಪಡ್ಪು ಅಂಡರ್ ಪಾಸ್ ಉದ್ಘಾಟನೆ
ಮಂಗಳೂರು: ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯಡಿ ರಸ್ತೆ,ಚರಂಡಿ ನಿರ್ಮಾಣ , ಕುಡಿಯುವ ನೀರಿನ ಸಂಪರ್ಕಕ್ಕೆ 200 ಕೋಟಿ ರೂ. ಅನುದಾನವನ್ನು ಸರಕಾರ ನೀಡಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಗರದ ಬಹುನಿರೀಕ್ಷಿತ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ಕೆಲ ಸೇತುವೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯಡಿ ಕರ್ನಾಟಕದಲ್ಲಿ 12 ಮಹಾನಗರ ಪಾಲಿಕೆಗಳಿಗೆ 2400 ಕೋಟಿ. ರೂ. ಅನುದಾನವನ್ನು ಸರಕಾರ ನೀಡಿದೆ. ಶೀಘ್ರದಲ್ಲಿ ಮಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
2018ರಲ್ಲಿ ಅಂದು ಯು.ಟಿ. ಖಾದರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹಾಕಿಕೊಂಡ ಯೋಜನೆ ಇವತ್ತು ತಾನು ನಗರಾಭಿವೃದ್ಧಿ ಸಚಿವನಾದ ಬಳಿಕ ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 49.90 ಕೋಟಿ ರೂ. ವೆಚ್ಚದ ಯೋಜನೆ ಕೈಗೊಂಡು ಮತ್ತು ಸಂಪರ್ಕ ರಸ್ತೆಗೆ ಮತ್ತು ನಿರ್ಮಾಣ ಕಾಮಗಾರಿಗೆ ನಗರಾಭಿವೃದ್ಧಿ ಇಲಖೆಯಿಂದ 7 ಕೋಟಿ ರೂ. ಖರ್ಚು ಮಾಡಿದ್ದೇವೆ. ರಾಷ್ಟ್ರೀಯ 66 ಸಂಪರ್ಕಿಸುವ ಈ ರಸ್ತೆಯು ಹಂಪನಟ್ಟೆ, ಪಾಂಡೇಶ್ವರ, ಮಂಗಳಾದೇವಿ ವಾಣಿಜ್ಯ ಪ್ರದೇಶಗಳ ಸಂಪರ್ಕಕ್ಕೆ ಅನುಕೂಲವಾಗಿದೆ. ಈ ಕಾಮಗಾರಿಯನ್ನು ಅತ್ಯುನ್ನತ ಗುಣಮಟ್ಟದಿಂದ ಕೈಗೊಳ್ಳಲಾಗಿದೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು.
ಕರ್ನಾಟಕದಲ್ಲಿ ಏಳು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ವಾರ್ಟ್ ಸಿಟಿ ನಿರ್ಮಾಣ ಮಾಡಲಾಗಿದೆ. ಮಂಗಳೂರಿನಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳ ಲಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಂತರ್ ರಾಷ್ಟ್ರೀಯ ಸ್ವಿಮ್ಮಿಂಗ್ ಪೂಲ್, ಡಿಸಿ ಕಚೇರಿ, ಪ್ರಜಾ ಸೌಧ , ಆಸ್ಪತ್ರೆಯ ಕಾಮಗಾರಿ ಸ್ಮಾರ್ಟ್ ಸಿಟಿ ಯೋಜನೆ ಯಡಿ ಪೂರ್ಣಗೊಂಡಿದೆ ಎಂದು ಹೇಳಿದರು.
*ಮಾರ್ಚ್-ಎಪ್ರಿಲ್‌ನಲ್ಲಿ 6 ಪಾಲಿಕೆಗಳಿಗೆ ಚುನಾವಣೆ: ಮಂಗಳೂರು ಸೇರಿದಂತೆ ರಾಜ್ಯದ 6 ನಗರಪಾಲಿಕೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲ. ಈ ಎಲ್ಲ ಪಾಲಿಕೆಗಳಲ್ಲಿ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಚುನಾವಣೆಯನ್ನು ಸರಕಾರ ನಡೆಸಲಿದೆ ಎಂದು ತಿಳಿಸಿದರು.
ಮಂಗಳೂರು ನಗರ ಸುಂದರವಾದ ನಗರವಾಗಿದೆ. ಅಭಿವೃದ್ಧಿಯಲ್ಲಿ ಬೆಂಗಳೂರು ಬಳಿಕ ಎರಡನೇ ನಗರವಾಗಿ ಭವಿಷ್ಯದಲ್ಲಿ ಅಭಿವೃದ್ಧಿಯಾಗಲಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಸನ್ಮಾನಿಸಲಾಯಿತು.
* ಇನ್ನೂ ಮೂರು ಅಂಡರ್‌ಪಾಸ್ ಅಗತ್ಯ: ಖಾದರ್
ವಿಧಾನ ಸಭೆಯ ಸ್ವೀಕರ್ ಯು.ಟಿ. ಖಾದರ್ ಮಾತನಾಡಿ ಅಂಡರ್ ಪಾಸ್ ಕೆಲ ಸೇತುವೆ ನಿರ್ಮಾಣದಿಂದಾಗಿ ಉಳ್ಳಾಲ ಕ್ಷೇತ್ರದವರಿಗೆ ಮಂಗಳೂರು ನಗರಕ್ಕೆ ಬರಲು ಹೆಚ್ಚು ಪ್ರಯೋಜನವಾಗಿದೆ. ತಾನು ನಗರಾಭಿವೃದ್ಧಿ ಸಚಿವರಾಗಿದ್ದಾಗ ಈ ಯೋಜನೆ ರೂಪಿಸಲಾಗಿತ್ತು. ಇದೀಗ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಿರುವ ಹಿನ್ನೆಲೆಯಲ್ಲಿ ತುಂಬಾ ಖುಶಿ ನೀಡಿದೆ. ಇನ್ನೂ ಮಂಗಳೂರು ನಗರದಲ್ಲಿ ಎರಡರಿಂದ ಮೂರು ಅಂಡರ್ ಪಾಸ್ ನಿರ್ಮಾಣ ಅಗತ್ಯ. ಇದರಿಂದ ವಾಹನಗಳ ಸುಗಮವಾಗಿ ಸಂಚಾರಕ್ಕೆ ಅನುಕೂಲ ವಾಗಲಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಮಾತನಾಡಿ ಮಹಾತ್ಮ ಗಾಂಧಿ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯಡಿ 200 ಕೋಟಿ ರೂ. ಸರಕಾರ ಮಂಜೂರು ಮಾಡಿದೆ. ಈ ಪೈಕಿ ಹಳೆಯ ಕಾಮಗಾರಿಗಳಿಗೆ ಸ್ವಲ್ಪ ಅನುದಾನದ ಹೊಂದಾಣಿಕೆ ಮಾಡಿಕೊಂಡು 169 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅತೀ ಶೀಘ್ರದಲ್ಲಿ ಸಿಎಂ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದರು.
ಸ್ಮಾರ್ಟಿ ಯೋಜನೆಯಡಿ ಆನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಬಾಕಿನ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದರು.
ಬೋಳಾರ -ಉಳ್ಳಾಲಕ್ಕೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ 250 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸರಕಾರ ಶೀಘ್ರದಲ್ಲೇ ಆಡಳಿತಾತ್ಮಕ ಅನುಮೋದನೆ ನೀಡಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಮಂಗಳೂರಿನಲ್ಲಿ ಸಮರ್ಕಕ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿದರು.
ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರುಗಳಾದ ಶಾಲೆಟ್ ಪಿಂಟೊ, ಟಿ.ಎಂ. ಶಾಹಿದ್, ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ,ಇಂದಿರಾ ಕ್ಯಾಂಟಿನ್ ಪರಿಶೀಲನಾ ಸಮಿತಿ ರಾಜ್ಯಾಧ್ಯಕ್ಷ ಪಿ.ಸಿ. ಪ್ರಸನ್ನ, ಮನಪಾ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ಮನಪಾ ಮಾಜಿ ಸದಸ್ಯೆ ಅಪ್ಪಿ, ಮಾಜಿ ಜಿ.ಪಂ ಸದಸ್ಯ ಶಾಹುಲ್ ಹಮೀದ್ , ಎಡಿಸಿ ರಾಜು ಉಪಸ್ಥಿತರಿದ್ದರು.
ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಸ್ವಾಗತಿಸಿದರು. ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.