×
Ad

ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ಎನ್‌ಸಿಸಿ ಅತ್ಯುನ್ನತ ಗೌರವ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್

Update: 2026-01-25 22:53 IST

ಮಂಗಳೂರು: ಎನ್‌ಸಿಸಿ ಕೆಡೆಟ್ ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನೀಡುವ ಅತ್ಯುನ್ನತ ಪ್ರಶಂಸಾ ಗೌರವ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಲಭಿಸಿದೆ.

ಜ.24ರಂದು ಹೊಸದಿಲ್ಲಿಯ ಆರ್‌ಡಿಸಿ 2026 ಕ್ಯಾಂಪಸ್‌ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಶಾರಿಗೆ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು.

ದೇಶದ 6 ಮಂದಿ ಎನ್‌ಸಿಸಿ ಕೆಡೆಟ್‌ಗಳಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ ಲಿಶಾ ಅವರು ನೇವಿ ಪರ ಭಾರತದಲ್ಲಿ ಈ ಗೌರವ ಪಡೆದ ಏಕೈಕ ಎನ್‌ಸಿಸಿ ಕೆಡೆಟ್ ಆಗಿದ್ದಾರೆ.

ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನಲ್ಲಿ ಅಸಾಧಾರಣ ನಾಯಕತ್ವ, ಧೈರ್ಯ, ಕರ್ತವ್ಯ ನಿಷ್ಠೆ ಅಥವಾ ಎನ್‌ಸಿಸಿ ಗೆ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವ ಶಿಬಿರದಂತಹ ಕಾರ್ಯಕ್ರಮಗಳಲ್ಲಿ ಈ ವರೆಗೆ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಗೌರವವು ಉತ್ತರ ಭಾರತದ ಎನ್‌ಸಿಸಿ ಕೆಡೆಟ್‌ಗಳೇ ಆಯ್ಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್‌ಗೆ ಈ ಗೌರವ ಲಭಿಸಿರುವುದು ವಿಶೇಷ.

ಮಂಗಳೂರು ಕೂಳೂರು ನಿವಾಸಿ ದೇಜಪ್ಪ ಬಂಗೇರ ಹಾಗೂ ಮಲ್ಲಿಕಾ ದಂಪತಿ ಪುತ್ರಿಯಾಗಿರುವ ಇವರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕಳೆದ ವರ್ಷ ಇವರು ಆರ್‌ಡಿಸಿಯಲ್ಲಿ ಭಾಗವಹಿಸಿದ್ದರು.

ಕೆಡೆಟ್ ಲಿಶಾ ಡಿ ಎಸ್ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ಅತ್ಯುತ್ತಮ ಕೆಡೆಟ್ ಆಗಿ ಆರ್‌ಡಿಸಿ ಯನ್ನು ಪೂರ್ಣಗೊಳಿಸಿದ ದೇಶದ ಟಾಪ್ 5 ರಲ್ಲಿ ಒಬ್ಬರಾಗಿದ್ದರು. ಲಿಶಾ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಆಲ್ ಇಂಡಿಯಾ ಬೆಸ್ಟ್ ಫ್ಲಾಗ್ ಏರಿಯಾ ಬ್ರೀಫರ್ ಪ್ರಶಸ್ತಿಯನ್ನು ಜಯಿಸಿದ್ದರು.ಡಿಜಿ ಎನ್‌ಸಿಸಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾದ ಸಾಂಸ್ಕೃತಿಕ, ಡ್ರಿಲ್, ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಫೈರಿಂಗ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News