×
Ad

ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅಮಾನತು

Update: 2024-01-18 23:08 IST

ಮಂಗಳೂರು: ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬೆಂಬಲ, ಫ್ಲ್ಯಾಟ್ ನಿವಾಸಿಗಳ ಜತೆ ಕಿರಿಕ್, ಹಿರಿಯ ಅಧಿಕಾರಿಗಳ ಜತೆ ಉಡಾಫೆಯಾಗಿ ವರ್ತಿಸಿದ್ದಾರೆಂಬ ಆರೋಪದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಯನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶಿಸಿದ್ದಾರೆ.

ನಗರದ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ ಧನ್ಯಾ ನಾಯಕ್ ಅವರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಭಜಂತ್ರಿ ಅವರಿಗೆ ದಾಳಿ ಮಾಡಲು ಸೂಚಿಸಿದ್ದರು. ಇದನ್ನು ಭಜಂತ್ರಿ ಅವರು ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

ಎಸಿಪಿಯಿಂದ ವರದಿ: ಮರಳು ಮಾಫಿಯಾದೊಂದಿಗೆ ಶಾಮಿಲಾಗಿರುವುದು, ಹಿರಿಯ ಅಧಿಕಾರಿಯ ಆದೇಶ ಪಾಲಿಸದಿರು ವುದು, ಠಾಣೆಗೆ ಭೇಟಿ ನೀಡಿದವರ ಜತೆಯೂ ಅಗೌರವ ತೋರಿರುವ ಬಗ್ಗೆ ಎಸಿಪಿ ಧನ್ಯ ನಾಯಕ್ ಪೊಲೀಸ್ ಕಮಿಷನರ್ ಅವರಿಗೆ ವರದಿ ನೀಡಿದ್ದರು. ಈ ಮಧ್ಯೆ ಭಜಂತ್ರಿ ನೆಲೆಸಿರುವ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಜತೆಯೂ ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂಬ ಬಗ್ಗೆ ಅಲ್ಲಿನ ನಿವಾಸಿಗಳು ದೂರು ನೀಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಪೊಲೀಸ್ ಕಮಿಷನರ್ ಅವರೇ ಭಜಂತ್ರಿ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ ಉಡಾಫೆಯಿಂದ ವರ್ತಿಸಿದ್ದಾ ರೆಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರ್ ಅವರು ಭಜಂತ್ರಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಗ್ರಾಮಾಂತರದಲ್ಲೂ ಸಸ್ಪೆಂಡ್: ಈ ಹಿಂದೆ ಭಜಂತ್ರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಸಂದರ್ಭ ಅಧಿಕಾರಿಗಳು, ಸಾರ್ವಜನಿಕರ ಜತೆ ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆಂಬ ಆರೋಪದಲ್ಲಿ ಅಮಾನತುಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News