×
Ad

‘ಕಾವೇರಿ 2.0’ ವೆಬ್‌ಸೈಟ್ ಸರ್ವರ್ ಸಮಸ್ಯೆ: ಸಾರ್ವಜನಿಕರು, ವಕೀಲರ ಪರದಾಟ; ತಕ್ಷಣ ಕ್ರಮಕ್ಕೆ ಆಗ್ರಹ

Update: 2025-02-04 14:49 IST

PC: landeed.com

ಮಂಗಳೂರು, ಫೆ. 4: ಆಸ್ತಿ ನೋಂದಣಿಯ ಕಾವೇರಿ 2.0 ವೆಬ್‌ಸೈಟ್ ಸರ್ವರ್ ಮತ್ತೆ ಡೌನ್ ಆಗಿರುವ ಕಾರಣ ರಾಜ್ಯಾದ್ಯಂತ ಶನಿವಾರದಿಂದ ಸಾರ್ವಜನಿಕರು ಹಾಗೂ ವಕೀಲರು ಪರದಾಡುವಂತಾಗಿದೆ. ಸಾಫ್ಟ್‌ವೇರ್‌ನ ಸಿಟಿಜನ್ ಲಾಗಿನ್ ಕಾರ್ಯನಿರ್ವಹಿಸದ ಕಾರಣ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದ್ದು, ಸರಕಾರ ತಕ್ಷಣ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ವಕೀಲರ ಸಂಘವು ಸೂಕ್ತ ಕಾನೂನು ಕ್ರಮ ವಹಿಬೇಕಾಗುತ್ತದೆ ಎಂದು ಮಂಗಳೂರು ವಕೀಲರ ಸಂಘ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ರಾಜ್ಯದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕಂದಾಯ ಇಲಾಖೆ ತೊಂದರೆಯ ಮೂಲಕ ಕಾರಣ ಹಾಗೂ ಪರಿಹಾರದ ಮಾರ್ಗ ಅರಿಯಲು ಪ್ರಯತ್ನಿಸುತ್ತಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಫೆ. 1ರಿಂದ ಸಮಸ್ಯೆ ಉಲ್ಬಣವಾಗಿದೆ. ಫೆ. 3ರಿಂದ ಉಪ ನೋದಮಣಿ ಕಚೇರಿಯ ಲಾಗಿನ್ ಕಾರ್ಯ ನಿರ್ವಹಿಸುತ್ತಿದ್ದರೂ ಸಿಟಿಝನ್ ಲಾಗಿನ್ ಕಾರ್ಯ ನಿರ್ವಹಿಸುತ್ತಿಲ್ಲ. ಈ ತಾಂತ್ರಿಕ ತೊಂದರೆಯಿಂದ ಸಾರ್ವಜನಿಕರು ಹಾಗೂ ವಕೀಲರು ಮಾತ್ರವಲ್ಲದೆ, ನೋಂದಣಿ ಕಚೇರಿಗೆ ಸಂಬಂಧಪಟ್ಟ ಇತರರು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸಂಬಂಧಿಸಿದ ಇಲಾಖೆ ಹಾಗೂ ಸರಕಾರ ಕ್ರಮ ವಹಿಸಬೇಕು. ನಾಗರಿಕ ಲಾಗಿನ್ ಮರು ಚಾಲನೆ ನೀಡುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆಸ್ತಿಗಳ ಕ್ಷಿಪ್ರ ನೋಂದಣಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾದ ಕಾವೇರಿ -2 ತಂತ್ರಾಶವು ರಾಜ್ಯದ ವಿವಿಧ ಜಿಲ್ಲೆಗಳ ಉಪ ನೋಂದಣಿ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಆಗಾಗ್ಗೆ ಸರ್ವರ್ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತಿದ್ದು, ಇದೀಗ ಫೆ. 1ರಿಂದ ಸಮಸ್ಯೆ ಬಿಗಡಾಯಿಸಿರುವ ಕಾರಣ ಆಸ್ತಿ ಪ್ರಕ್ರಿಯೆಗಳು ಬಹುತೇಕವಾಗಿ ಸ್ಥಗಿತಗೊಂಡಿರುವ ಬಗ್ಗೆ ರಾಜ್ಯದಾದ್ಯಂತ ಸಮಸ್ಯೆ ಎದುರಾಗಿದೆ. ದ.ಕ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ದಿನವೊಂದಕ್ಕೆ ವಿವಿಧ ಉಪ ನೋಂದಣಿ ಕಚೇರಿಗಳಲ್ಲಿ ಈ ತಂತ್ರಾಂಶದಡಿ ಪ್ರತಿನಿತ್ಯ 100ರಷ್ಟು ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿದ್ದರೆ, ಸರ್ವರ್ ಸಮಸ್ಯೆಯಿಂದಾಗಿ 10 ನೋಂದಣಿ ಕಾರ್ಯವೂ ನಡೆಯುತ್ತಿಲ್ಲ ಎನ್ನಲಾಗಿದೆ.

‘ರಾಜ್ಯದಾದ್ಯಂತ ಸರ್ವರ್ ಸಮಸ್ಯೆ ಎದುರಾಗಿದ್ದು, ನೆಟ್‌ವರ್ಕ್‌ನಲ್ಲಿ ಏರಿಳಿತದಿಂದ ನೋಂದಣಿ ಕಾರ್ಯದಲ್ಲಿ ಅಡಚಣೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳ ಗಮನದಲ್ಲಿದ್ದು, ಸರಿಪಡಿಸುವ ಕಾರ್ಯ ನಡೆಯುತ್ತಿದೆ. ’

ಹೇಮಗಿರೀಶ್, ಜಿಲ್ಲಾ ನೋಂದಣಾಧಿಕಾರಿ, ದ.ಕ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News