×
Ad

ಕೊರಗ ಸಮುದಾಯಕ್ಕೆ ಜಿಲ್ಲಾಡಳಿತ, ತಾಲೂಕು ಕಚೇರಿ, ಮನಪಾದಿಂದ ಮೋಸ: ಮುಖಂಡರ ಆರೋಪ

Update: 2025-12-30 22:33 IST

ಸುರತ್ಕಲ್ : ಇಲ್ಲಿನ ಗ್ರಾಮದ ಸರ್ವೆ ನಂಬರ್ 211-ಬಿ ಯಲ್ಲಿನ ಬಡ ಕೊರಗ ಕುಟುಂಬಗಳಿಗೆ ಎರಡೆರಡು ಬಾರಿ ಭೂಮಂಜೂರಾತಿ ಮಾಡುವ ಮೂಲಕ ಜಿಲ್ಲಾಡಳಿತ, ತಾಲೂಕು ಕಚೇರಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಮೋಸ ಮಾಡಿದೆ ಎಂದು ಆರೋಪಿಸಿ ಕೊರಗ ಸಮುದಾಯದ ಮುಖಂಡರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸುರತ್ಕಲ್ ವಲಯದ ವತಿಯಿಂದ ಸರ್ವೆ ನಂಬರ್ 211-ಬಿಯಲ್ಲಿನ ಬಡ ಕೊರಗ ಕುಟುಂಬಗಳಿಗೆ ಎರಡೆರಡು ಬಾರಿ ಭೂಮಂಜೂರಾತಿ ಮಾಡುವ ಮೂಲಕ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಇಂದು ಸುರತ್ಕಲ್ ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದರು.

1981ರಲ್ಲಿ ಸುರತ್ಕಲ್ ಗ್ರಾಮ ಪಂಚಾಯತ್ ಆಗಿದ್ದ ಸಂದರ್ಭ ಸರ್ವೇ ನಂಬರ್ 211 ಬಿ ಮಧ್ಯ ಎಂಬಲ್ಲಿ ಕೊರಗ ಸಮುದಾಯದ ಸುನಾರು 31ಮಂದಿಗೆ 5ಸೆಂಟ್ಸ್ ನಂತೆ ನವೇಶನ‌ ಮಂಜೂರಾತಿ ಮಾಡಲಾಗಿತ್ತು. ಅದರಂತೆ ಕೆಲವರು ಸರಕಾರದ ಸಹಾಯ ಧನ ಪಡೆದುಕೊಂಡು ಮನೆಗಳನ್ನು ನಿರ್ಮಿಸಿದ್ದರು.

ಬಳಿಕ 2003ರಲ್ಲಿ ಮಹಾ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅದೇ 5ಸೆಂಟ್ಸ್ ನಿವೇಶದ ಬದಲಿಗೆ ಪ್ರತೀ ಕುಟುಂಬಕ್ಕೆ 1.25ಸೆಂಟ್ಸ್ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದಾರೆ‌.

ಇದೇ ವಿಚಾರವಾಗಿ ಕೊರಗ ಸಮುದಾಯದ ಮುಖಂಡರು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಯಾಗಿ ಮನವಿಗಳನ್ನು ಸಲ್ಲಿಸಿದ್ದರು. ಅಲ್ಲದೆ, 2025ರ ಏಪ್ರಿಲ್ 15ರಂದು ತಹಶೀಲ್ದಾರ್ ಮತ್ತು ಮಹಾ ನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದು ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ‌ ಎಂದು ದೂರಿದ್ದಾರೆ.

ಮನಪಾದ ನಿರ್ಲಕ್ಯ ಮತ್ತು ತಪ್ಪುಗಳಿಂದಾಗಿ ನಮ್ಮ ಮನೆಗಳನ್ನು ಸರಿಪಡಿಸುವುದಾಗಲೀ, ಹೊಸ ಮನೆಗಳ ನಿರ್ಮಾಣ ಮಾಡುವುದಾಗಲೀ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣ ನಮ್ಮ ಮನವಿಯನ್ನು ಪುರಸ್ಕರಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೊರಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಶೇಖರ ವಾಮಂಜೂರು ಅವರು, ನಮ್ಮ ಸಮುದಾಯಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತಪ್ಪುಗಳಿಂದಾಗಿ ನಮಗೆ ತೊಂದರೆಗಳಾಗುತ್ತಿದೆ. ನಮಗೆ ಕೈಗೆ ಬೆನ್ನೆ ಸವರಿ ಮುಂಗೈನೆಕ್ಕಿಸುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ನಮ್ಮ‌ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಕೊಂಡುಹೋದರೆ ಅವರು ಬೇರೆ ಬೇರೆ ಕಾರಣಗಳನ್ನು ನೀಡಿ ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಶೀಘ್ರ ನೆರವೇರಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಪ್ರತಿಭಟನಾಕಾರರು ಸುರತ್ಕಲ್ ವಲಯದ ಉಪ ತಹಶೀಲ್ದಾರ್ ನವೀನ್ ಅವರಿಗೆ ಮನವಿಪತ್ರ ನೀಡಿ ತಮ್ಮ ಬೇಡಿಕೆಗಳನ್ನು ಅವರ‌ ಮುಂದಿಟ್ಟರು. ಮನವಿ ಸ್ವೀಕರಿಸಿ‌ ಮಾತನಾಡಿದ ಉಪತಹಶೀಲ್ದಾರ್ ಅವರು, ಕೊರಗ ಸಮುದಾಯದ ಸಮಸ್ಯೆಗಳನ್ನು ಕೂಲಂಕಷವಾಗಿ ವಿವರಿಸಿ ತಕ್ಷಣವೇ ಮನವಿಯನ್ನು ತಹಶೀಲ್ದಾರ್, ಜಿಲ್ಲಾಧಿಕಾರಿ ಗಳಿಗೆ ತಲುಪಿಸಲಾಗುವುದು. ಶೀಘ್ರವೇ ಮಧ್ಯ ಸಮುದಾಯದ ಕಾಲನಿಗೆ ಭೇಟಿ ನೀಡಿ ಪರಿಹಾರ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

"ನಾವು 5ಸೆಂಟ್ಸ್ ನಿವೇಶನ ಹೊಂದಿದ್ದರೂ ಮನಪಾ ನಮಗೆ 1.25 ಸೆಂಟ್ಸ್ ನ ಹಕ್ಕುಪತ್ರ ನೀಡಿದೆ. ಇದು ಸುಳ್ಳಾದ ಹಕ್ಕು ಪತ್ರ. ಈ ಹಕ್ಕು ಪತ್ರದಿಂದ ನಮಗೆ ಹೊಸ ಮನೆ‌ ನಿರ್ಮಾಣಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು 2ತಿಂಗಳ ಕಾಲಾವಕಾಶ ನೀಡುತ್ತಿದ್ದೇವೆ. ಆಬಳಿಕವೂ ನಮ್ಮ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಸಮುದಾಯದ ಎಲ್ಲರೂ ಮಕ್ಕಳು ಮರಿಗಳೊಂದಿಗೆ ಮನಾಪ ಕಚೇರಿಯಲ್ಲೆ ಬಂದು ಕುಳಿತುಕೊಳ್ಳುತ್ತೇವೆ".

- ಕರಿಯ ಕೆ‌., ಅಧ್ಯಕ್ಷ, ವಾಮಂಜೂರು ವಲಯ

"1981ರಲ್ಲಿ ನೀಡಿದ್ದ 5ಸೆಂಟ್ಸ್ ನಿವೇಶನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಯಾಕೆ 1.25 ಸೆಂಟ್ಸ್ ಆಯಿತು. ಅಧಿಕಾರಿಗಳು ಕಣ್ಣುಮುಚ್ಚಿ ಕೆಲಸ ಮಾಡುತ್ತಿದ್ದಾರಾ?. ಅಧಿಕಾರಿಗಳು ಕೊರಗ ಸಮುದಾಯ ವನ್ನು ಅವರ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದು ಕೊಳ್ಳಲು ಅಲೆದಾಡಿಸುತ್ತಿದ್ದಾರೆ. ಅಧಿಕಾರಿಗಳು ಅವರನ್ನೂ ಮನುಷ್ಯರೆಂದು ಪರಿಗಣಿಸಿದಂತೆ ಇಲ್ಲ. ಹಾಗಾಗಿ ಅವರನ್ನು ಮನುಷ್ಯರಾಗಿ ಪರಿಗಣಿಸಿ ಅವರಜೊತೆ ನಿಂತು ಅವರ ಅಭಿವೃದ್ಧಿಗೆ ಶ್ರಮಿಸಬೇಕು".

- ಶ್ರೀನಾಥ್ ಕುಲಾಲ್ ಕಾಟಿಪಳ್ಳ

ಗೌರವ ಸಲಹೆಗಾರರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News