ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: ಪರಾರಿಯಾಗಲು ಯತ್ನಿಸಿದ ಆರೋಪಿ ಕಣ್ಣನ್ ಮಣಿಗೆ ಗುಂಡೇಟು
ಉಳ್ಳಾಲ,ಜ.21: ಸ್ಥಳ ಮಹಜರು ನಡೆಸುವ ವೇಳೆ ಪೊಲೀಸ್ ಭದ್ರತೆ ಮುರಿದು ಪರಾರಿಯಾಗಲು ಯತ್ನಿಸಿದ ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಮುಂಬೈಯ ಚೇಂಬೂರ್ ಸಮೀಪದ ತಿಲಕನಗರದ ಕಣ್ಣನ್ ಮಣಿ ಎಂಬಾತನಿಗೆ ಪೊಲೀಸರು ಗುಂಡು ಹಾಕಿದ ಘಟನೆ ಮಂಗಳವಾರ ಸಂಜೆ ಕೆ.ಸಿ.ರೋಡ್ ಬಳಿ ನಡೆದಿದೆ.
ಈ ಘಟನೆಯಲ್ಲಿ ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ನಾಲ್ಕು ಮಂದಿಗೆ ಗಾಯವಾಗಿದ್ದು, ಎಲ್ಲರನ್ನೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳ ಪೈಕಿ ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಕಣ್ಣನ್ ಮಣಿ (36) ಎಂಬಾತನನ್ನು ಸ್ಥಳ ಮಹಜರು ನಡೆಸುವ ಸಲುವಾಗಿ ಮಂಗಳವಾರ ಸಂಜೆ 4:20ರ ವೇಳೆ ಕೆ.ಸಿ.ರೋಡ್ ಸಮೀಪದ ಆಲಂಕಾರು ಗುಡ್ಡೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ಕಣ್ಣನ್ ಮಣಿ ಸ್ಥಳದಲ್ಲೇ ಇದ್ದ ಒಡೆದ ಮದ್ಯದ ಬಾಟಲಿಯಿಂದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ. ಅಲ್ಲದೆ ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣರನ್ನು ದೂಡಿ ಹಾಕಿ ಅವರ ಮೇಲೂ ಹಲ್ಲೆ ನಡೆಸಲು ಮುಂದಾದ. ತಕ್ಷಣ ಅಪಾಯದ ಮುನ್ಸೂಚನೆ ಅರಿತ ಸಿಸಿಬಿ ನಿರೀಕ್ಷಕ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಕೂಡ ನಿರ್ಲಕ್ಷಿಸಿದ ಆರೋಪಿ ಕಣ್ಣನ್ ಮಣಿಯ ಮೊಣಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದರು.
ಈ ಘಟನೆಯಲ್ಲಿ ಉಳ್ಳಾಲ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎಚ್., ಸಿಸಿಬಿ ಘಟಕದ ಹೆಡ್‌ಕಾನ್‌ಸ್ಟೇಬಲ್ ಆಂಜನಪ್ಪ, ಉಳ್ಳಾಲ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ನಿತಿನ್ ಗಾಯಗೊಂಡಿದ್ದಾರೆ. ನಾಲ್ಕು ಮಂದಿ ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.17ರಂದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಸೋಮವಾರ ಬಂಧಿಸಿದ್ದರು. ಬಂಧಿತರಿಂದ ಕೃತ್ಯದ ವೇಳೆ ಬಳಸಲಾದ ಕಾರು, ಕಳವು ಮಾಡಲಾದ ಎರಡು ಗೋಣಿಚೀಲ ಚಿನ್ನ, ಎರಡು ತಲವಾರು, ಪಿಸ್ತೂಲು, 3 ಸಜೀವ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದರು.