×
Ad

ಗುಂಡಿಗಳನ್ನು ಮುಚ್ಚುವ ಸಲುವಾಗಿ ಕೂಳೂರು ಹಳೆ ಸೇತುವೆ ಬಂದ್‌: ಸಾಲುಗಟ್ಟಿ ನಿಂತ ವಾಹನಗಳು

Update: 2025-08-05 19:18 IST

ಕೂಳೂರು: ಕೂಳೂರು ಹಳೆ ಸೇತುವೆ ತೇಪೆ ಕಾರ್ಯ ನಡೆಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66 ಬ್ಲಾಕ್‌ ಆಗಿದ್ದು, ಜನರು ಪರದಾಡುವಂತಾಯಿತು.

ಉಡುಪಿ- ಮಂಗಳೂರು ಸಂಚರಿಸುವ ಕೂಳೂರು ಹಳೆ ಸೇತುವೆಯಲ್ಲಿನ ಗುಂಡಿಗಳನ್ನು ಮುಚ್ಚುವ ಸಲುವಾಗಿ ಇಂದು ಕೂಳೂರಿನ ಹಳೆ ಸೇತುವೆಯನ್ನು ಬಂದ್‌ ಮಾಡಲಾಗಿತ್ತು. ಉಡುಪಿ ಮಂಗಳೂರು ಸಂಚರಿಸುವ ವಾಹನಗಳನ್ನು ಪಣಂಬೂರು ಬಂದರು ಬಳಿ ಡೈವರ್ಟ್‌ ಮಾಡಿ ಏಕಮುಖ ಸಂಚಾರ ಹೊಂದಿದ್ದ ಮಂಗಳೂರು - ಉಡುಪಿ ಹೆದ್ದಾರಿಯನ್ನು ದ್ವಿಮುಖ ರಸ್ತೆಯಾಗಿ ವಾಹನಗಳನ್ನು ಬಿಡಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ವಾಹನಗಳು ಬೈಕಂಪಾಡಿವರೆಗೂ ಸಾಲುಗಟ್ಟಿ ನಿಲ್ಲುವಂತಾಯಿತು. ಅಲ್ಲದೆ, ಉಡುಪಿ ಭಾಗಕ್ಕೆ ತೆರಳುತ್ತಿದ್ದ ವಾಹನಗಳು ಕೊಟ್ಟಾರ ಫೈಓವರ್‌ ವರೆಗೂ ಬ್ಲಾಕ್‌ ಆಗಿತ್ತು. ಇದರಿಂದಾಗಿ ಶಾಲೆ- ಕಾಲೇಜು ಬಿಟ್ಟು ಮನೆಕಡೆಗೆ ತೆರಳುತ್ತಿದ್ದ ಮಕ್ಕಳು, ಕೆಲಸ ಕಾರ್ಯಗಳಿಗಾಗಿ ಬಂದಿದ್ದ ಮಕ್ಕಳು ಹೈರಾಣಾಗುವಂತಾಯಿತು.

ಹೆದ್ದಾರಿಯ ಎರಡೂ ಕಡೆಗಳಲ್ಲಿ ಭಾರೀ ಪ್ರಮಾಣದ ಬ್ಲಾಕ್‌ ಇದ್ದ ಕಾರಣ ರೋಗಿಗಳನ್ನು ಹೊತ್ತು ತುರ್ತಾಗಿ ಆಸ್ಪತ್ರೆ ಗಳ ಕಡೆ ತೆರಳುತ್ತಿದ್ದ ಅಂಬುಲೆನ್ಸ್‌ ಗಳು ರಸ್ತೆಯ ಮಧ್ಯದಲ್ಲೇ ಸಿಲುಕಿ ಪರದಾಡುವಂತಾಯಿತು. ಅಲ್ಲದೆ, ರೋಗಿ ಗಳೊಂದಿಗೆ ಪ್ರಯಾಣಿಸುತ್ತಿದ್ದವರು ಕಣ್ಣೀರು ಹಾಕುತ್ತಾ ರಸ್ತೆ ತೆರವು ಮಾಡಿಕೊಡುವಂತೆ ವಿನಂತಿಸುತ್ತಿದ್ದುದ್ದು ಕಂಡು ಬಂತು. ಇನ್ನು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರಸ್ತೆ ಮಧ್ಯೆ ವಾಹನಗಳಿಂದ ಇಳಿದು ನಡೆದು ಕೂಳೂರು ಜಂಕ್ಷನ್‌ ವರೆಗೆ ನಡೆದು ಬಳಿ ಆಟೊ ರಿಕ್ಷಾಗಳ ಮೂಲಕ ತೆರಳುತ್ತಿದ್ದರು. ಇನ್ನೂ ಕೆಲವು ವಾಹನ ಸವಾರರು ಬಂದ ದಾರಿಗೆ ಸಂಕವಿಲ್ಲ ಎಂದು ಹಿಂದೆ ತಿರುಗಿ ತಮ್ಮ ಮನೆಗೆಳ ಕಡೆಗೆ ತೆರಳುತ್ತಿದ್ದರು.

ಭಾರೀ ಬ್ಲಾಕ್‌ ನಿಂದಾಗಿ ಖಾಸಗಿ ಬಸ್‌ಗಳು ಟ್ರಿಪ್‌ ಕಟ್‌ ಮಾಡಿ ರಸ್ತೆ ಬದಿ ನಿಲ್ಲಿಸುತ್ತಿದ್ದರು. ಅಲ್ಲದೆ, ಹೆದ್ದಾರಿ ರಿಪೇರಿಯ ಅರಿವಿಲ್ಲದೆ ಬಂದಿದ್ದ ಘನ ವಾಹನಗಳನ್ನು ಮಂಗಳೂರು ಉತ್ತರ ಸಂಚಾರ ಪೊಲೀಸರು ಸೇತುವೆ ಪಕ್ಕದಲ್ಲಿನ ಜಾಗಗಳಲ್ಲಿ ಘನ ವಾಹನಗಳನ್ನು ಪಾರ್ಕ್‌ ಮಾಡಿಸುತ್ತಿದ್ದುದು ಕಂಡು ಬಂತು. ಟ್ರಾಫಿಕ್‌ ಪೊಲೀಸರ ಸಮಯೋಚಿತ ಕಾರ್ಯದಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗುವಂತಾಗಿತ್ತು. ವಾಹನ ದಟ್ಟನೆ, ಸಾರ್ವಜನಿಕರ ಹಿಡಿಶಾಪಗಳ ನಡುವೆ ಪೊಲೀಸರು ವಾಹನ ದಟ್ಟನೆ ನಿಭಾಯಿಸುವಾಗ ಹೈರಾಣಾಗಿದ್ದರು.

ಒಟ್ಟಾರೆಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೇ ನಡೆಸಿರುವ ಹೆದ್ದಾರಿ ತೇಪೆ ಕಾರ್ಯದಿಂದಾಗಿ ಪೊಲೀಸರು, ಸಾರ್ವಜನಿಕರು ಪೇಚಿಗೆ ಸಿಲುಕುವಂತಾಗಿದ್ದಂತೂ ಸತ್ಯ.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News